

ಬೆಂಗಳೂರು: ಶಾಸಕ ಮುನಿರತ್ನ ಮಹಿಳೆಯನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದು ಕೇಳಿ ಬಹಳ ನೋವಾಯಿತು. ಪ್ರತಿಪಕ್ಷ ನಾಯಕ ಆರ್. ಅಶೋಕ್ ಮೇಲೆಯೂ ಕೂಡ ಹೀಗೆ ಮಾಡಿದ್ದಾರೆ ಎಂದು ಕೇಳಿದ್ದೇನೆ. ಇಂತಹ ಮನೋಭಾವ ಇರುವ ಶಾಸಕನ ವಿಚಾರದಲ್ಲಿ ಸತ್ಯ ಹೊರಗೆ ಬರಬೇಕು ಎಂದು ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌ಐವಿ ಅತ್ಯಂತ ಮಾರಕ ಪಿಡುಗು. ಎಚ್‌ಐವಿ ಸೋಂಕಿತ ಮಹಿಳೆ ಮುನಿರತ್ನ ವಿರುದ್ಧ ಆರೋಪ ಮಾಡಿದ್ದಾಳೆ. ಎಚ್‌ಐವಿ ಬಂದಿರುವ ರೋಗಿಗಳನ್ನು ಬಳಸಿಕೊಂಡಿರುವುದು ದುರ್ದೈವ. ಎಚ್‌ಐವಿ ರಕ್ತದಿಂದ ಇಲ್ಲವೆ ಲೈಂಗಿಕ ಸಂಪರ್ಕದಿಂದ ಹರಡುತ್ತೆ. ಎಚ್‌ಐವಿ ರೋಗಿಯಿಂದ ರಕ್ತ ತೆಗೆದುಕೊಂಡು ಬೇರೆಯವರಿಗೆ ಹಾಕಿದರೆ ಶೇ.80ರಷ್ಟು ರೋಗ ಬರುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಎಚ್‌ಐವಿ ಸೋಂಕು ಬಂದಿರುವುರು ಆರಂಭದ ಐದು ವರ್ಷದ ತನಕ ಗೊತ್ತೇ ಆಗುವುದಿಲ್ಲ. ಸಾಮಾನ್ಯ ಜ್ವರ ಬಂದು ಹೋದರೂ ಗೊತ್ತಾಗೋದಿಲ್ಲ. ಬಯಾಲಜಿಕಲ್ ವಾರ್ ಬಗ್ಗೆ ನಾವು ಬೇರೆ ಬೇರೆ ದೇಶದಲ್ಲೆಲ್ಲ ಕೇಳಲ್ಪಟ್ಟಿದ್ದೇವೆ. ಅಂತಹದ್ದೇ ಇದು ಎಂದರು.
ಮುನಿರತ್ನ ವಿರುದ್ಧ ಸಾಕಷ್ಟು ಪ್ರಕರಣಗಳ ಆರೋಪವಿದೆ, ಓಟರ್ ಐಡಿ ಪ್ರಕರಣದ ಬಗ್ಗೆ ಸ್ವತಃ ಪ್ರಧಾನಿಯವರೇ ಪ್ರಸ್ತಾಪ ಮಾಡಿದ್ದರು. ಜತೆಗೆ ಫೈಲ್‌ಗಳನ್ನು ಸುಟ್ಟು ಹಾಕಿದ್ದರ ಬಗ್ಗೆ ಆರೋಪವಿದೆ. ಅಂತಹವರ ವಿರುದ್ಧ ಕಠಿಣ ಕ್ರಮ ಆಗಬೇಕೆಂದರು.