ಖಾಸಗಿ ಕಾರ್ಖಾನೆ ಮುಚ್ಚದಿರಲು ಒತ್ತಾಯ

cpim,webp
ಕೋಲಾರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಿಐಟಿಯು ಉಪಾಧ್ಯಕ್ಷ ಎಚ್​.ಎನ್​.ಗೋಪಾಲಗೌಡ ಮಾತನಾಡಿದರು. ಎಂ.ವಿಜಯಕೃಷ್ಣ, ಪ್ರಭಾಕರ್​, ಹರೀಶ್​ ಇದ್ದರು.
Published on

ಕೋಲಾರ: ಮಾಲೂರು ಕೈಗಾರಿಕಾ ಪ್ರದೇಶದ ಖಾಸಗಿ ಕಾರ್ಖಾನೆಯೊಂದು ಸುಳ್ಳು ದಾಖಲೆ ಸೃಷ್ಟಿಸಿ, ನಷ್ಟ ತೋರಿಸಿ ಅಕ್ರಮವಾಗಿ ಕಾರ್ಖಾನೆ ಮುಚ್ವಲು ಹೊರಟಿರುವುದನ್ನು ಕೈ ಬಿಡಬೇಕು ಎಂದು ರಾಜ್ಯ ಸಿಐಟಿಯು ಉಪಾಧ್ಯಕ್ಷ ಎಚ್​.ಎನ್​.ಗೋಪಾಲಗೌಡ ಒತ್ತಾಯಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಖಾನೆ ಮುಚ್ಚುವುದರಿಂದ ಸುಮಾರು 20 ವರ್ಷದಿಂದ ದುಡಿಯುತ್ತಿರುವ ಸಾವಿರಾರು ಕಾರ್ಮಿಕರು ಬೀದಿಪಾಲಾಗುತ್ತಾರೆ. ಈಗಾಗಲೇ ಸುಮಾರು 81 ಕಾಯಂ ಕಾರ್ಮಿಕರನ್ನು ಹೊರಹಾಕಲು ಮುಂದಾಗಿದ್ದು, ಇದು ಕಾರ್ಮಿಕ ವಿರೋಧಿಯಾಗಿದೆ. ಕೂಡಲೇ ಕಾರ್ಖಾನೆ ಮುಚ್ಚುವ ಆದೇಶ ವಾಪಸ್​ ಪಡೆದು ಕಾರ್ಮಿಕರ ಹಿತ ಕಾಪಾಡಬೇಕು ಎಂದರು.

ಕೈಗಾರಿಕೆಯಲ್ಲಿ ಬುಲ್ಡೋಜರ್​ಗೆ ಬೇಕಾಗುವ ವಿವಿಧ ಸಾಮಗ್ರಿ ತಯಾರಿಸಿ ವಿದೇಶಕ್ಕೆ ಕಳಸಲಾಗುತ್ತದೆ. ಇದರಿಂದಾಗಿ ಲಾಭದಾಯಕವಾಗಿ ಕಂಪನಿ ನಡೆಯುತ್ತಿದೆ, ಕಾಯಂ ಕಾರ್ಮಿಕರನ್ನು ಕೈ ಬಿಟ್ಟು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಕಂಪನಿ ಮುಚ್ಚದಂತೆ ಈಗಾಗಲೇ ಹೋರಾಟ ನಡೆಸಲಾಗಿದೆ, ಕೂಡಲೇ ಜಿಲ್ಲಾಧಿಕಾರಿ ಮಾಲೀಕ ವರ್ಗವನ್ನು ಕರೆಸಿ ಕಾರ್ಖಾನೆ ಮುಂದುವರೆಸುವಂತೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿವಿಧ ಸಂಘಸಂಸ್ಥೆಗಳ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಕಾರ್ಖಾನೆಯ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ಪ್ರಭಾಕರ್​, ಶ್ರೀಧರ್​ ರಾವ್​, ಅಂಜನಪ್ಪ, ಹರೀಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net