

ಬೇಲೂರು: ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೋಮವಾರ ಕೈಗೆ ಕಪ್ಪುಬಟ್ಟೆ ಕಟ್ಟಿಕೊಂಡು 2ನೇ ಹಂತದ ಮುಷ್ಕರ ಆರಂಭಿಸಿದರು.
ಸೋಮವಾರ ಬೆಳಗ್ಗೆ ಮುಷ್ಕರಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ರಮೇಶ್, ನಮ್ಮ ಗ್ರಾಮಾ ಆಡಳಿತಾರಿಗಳ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ 2024ರಲ್ಲೂ ಮೊದಲ ಹಂತದಲ್ಲಿ ಮುಷ್ಕರ ನಡೆಸಿ ಸರ್ಕಾರ ಗಮನ ಸೆಳೆಯಲಾಗಿತ್ತು. ಆಗ ಬೇಡಿಕೆ ಈಡೇರಿಸುವುದಾಗಿ ನೀಡಿದ್ದ ಭರವಸೆ ಹುಸಿಯಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ 2ನೇ ಹಂತದ ಮುಷ್ಕರ ಕೈಗೊಂಡಿದ್ದೇವೆ.
ಪ್ರತಿ ಗ್ರಾಮಾಡಳಿತ ಅಧಿಕಾರಿಗಳಿಗೆ ಮೂಲಸೌಲಭ್ಯಗಳೊಂದಿಗೆ ಸೇವಾ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ನಮ್ಮ 23 ಬೇಡಿಕೆಗಳನ್ನು ಸರ್ಕಾರ ಮರುಪರಿಸೀಲಿಸಿ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಂಘದ ನಿರ್ದೇಶನದಂತೆ ಬೇಲೂರು ತಾಲೂಕು ಘಟಕದಿಂದ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಸೋಮವಾರದಿಂದ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೂ ಎರಡನೇ ಹಂತದಲ್ಲಿ ಪ್ರತಿಭಟನಾ ಮುಷ್ಕರಕ್ಕೆ ಮುಂದಾಗಿದ್ದೇವೆ. ಸರ್ಕಾರ ನಮಗೆ ಸ್ಪಂದಿಸದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕರ್ನಾಟಕ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಗೌರವಾಧ್ಯಕ್ಷ ಹನುಮಂತು, ಉಪಾಧ್ಯಕ್ಷ ಭಾನುಪ್ರಕಾಶ್, ಪ್ರಧಾನ ಕಾರ್ಯದರ್ಶಿ ಆಯೇಷಾ ಭಾನು, ಖಜಾಂಚಿ ಬಸಪ್ಪ, ಸಹ ಕಾರ್ಯದರ್ಶಿ ಗಣೇಶ್ ಇತರರು ಇದ್ದರು.