ಸರ್ಕಾರಿಶಾಲೆ ಸ್ಥಳಾಂತರಕ್ಕೆ ಆಗ್ರಹ

Oplus_16908288
ಸರ್ಕಾರಿ ಶಾಲೆಯನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ನಂಜನಗೂಡು ತಾಲೂಕಿನ ಸೂರಹಳ್ಳಿ ಗ್ರಾಮದಲ್ಲಿ ರೈತ ಸಂಘ ಹಾಗೂ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು.
Published on

ನಂಜನಗೂಡು: ಕೆರೆಯ ಮಗ್ಗುಲಲ್ಲಿ ನಿರ್ಮಾಣವಾಗಿರುವ ಶಾಲೆಯನ್ನು ಸ್ಥಳಾಂತರಿಸುವಂತೆ ಅಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗ್ರಾಮಸ್ಥರು ತಾಲೂಕಿನ ಸೂರಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಸತೀಶ್ ನೇತೃತ್ವದಲ್ಲಿ ಜಮಾವಣೆಗೊಂಡ ನೂರಾರು ಕಾರ್ಯಕರ್ತರು ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಸತೀಶ್ ಮಾತನಾಡಿ, ಸೂರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಉತ್ತಮ ಕಟ್ಟಡ ಇಲ್ಲ. ಜತೆಗೆ ಕೊಳಚೆ ನೀರು ನಿಲ್ಲುವ ಕೆರೆಯ ಪಕ್ಕದಲ್ಲಿ ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಿರುವ ಕಾರಣ ಗಬ್ಬು ವಾಸನೆ ಹಾಗೂ ಹಲವು ಸಾಂಕ್ರಾಮಿಕ ರೋಗಗಳಿಗೆ ಮಕ್ಕಳು ತುತ್ತಾಗುತ್ತಿದ್ದಾರೆ. ನೊಣಗಳು ಮತ್ತು ಸೊಳ್ಳೆಗಳ ಕಾಟ ಹೆಚ್ಚಾಗಿರುವ ಕಾರಣ, ಶಾಲೆಯಲ್ಲಿ ಸರಿಯಾಗಿ ಪಾಠವನ್ನು ಕೇಳಲು ಸಾಧ್ಯವಾಗುತ್ತಿಲ್ಲ. ಮಧ್ಯಾಹ್ನ ಬಿಸಿ ಊಟವನ್ನು ಸೇವಿಸಿದ ಬಳಿಕ ವಾಂತಿ ಭೇದಿ, ಸುಸ್ತು, ತಲೆನೋವು ಎಂದು ಶಾಲೆಗೆ ಮಕ್ಕಳು ಬಾರದೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದರು.

ವಿಷಯ ತಿಳಿಯುತ್ತಿದ್ದಂತೆ ಪ್ರತಿಭಟನಾ ಸ್ಥಳಕ್ಕೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಭೇಟಿ ನೀಡಿ ರೈತರು ಮತ್ತು ಪಾಲಕರ ಮನವಿ ಆಲಿಸಿ, ಶಾಲೆಯ ಸ್ಥಳಾಂತರಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ನೂತನ ಶಾಲಾ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ತಾಲೂಕು ಕಂದಾಯ ಇಲಾಖೆ ಜತೆ ಮಾತನಾಡಿ ಗ್ರಾಮದ ಸರ್ವೇ ನಂಬರ್ 194ರಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಲು ಅಗತ್ಯವಾದ ಜಾಗವನ್ನು ಗುರುತು ಮಾಡಿ ಶಾಲಾ ಕಟ್ಟಡ ನಿರ್ಮಾಣ ಮಾಡಲು ಮುಂದಾಗುತ್ತೇನೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್ ರಾವ್, ಮಹಿಳಾ ಅಧ್ಯಕ್ಷ ಶ್ವೇತಾ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಹೋಬಳಿ ಅಧ್ಯಕ್ಷ ಮಹಾದೇವ ನಾಯಕ, ಗ್ರಾಮಸ್ಥರಾದ ಗೌಡಕೆ ನಾಗಪ್ಪ, ಪುಟ್ಟಪ್ಪ, ಜವರಯ್ಯ, ಕೃಷ್ಣಯ್ಯ, ಸಿದ್ದನಾಯಕ್, ಮಹಾದೇವ ನಾಯಕ, ಮಲ್ಲೇಶ ಶೆಟ್ಟಿ, ಸಿದ್ದರಾಜು ಸೇರಿದಂತೆ ಗ್ರಾಮಸ್ಥರು, ರೈತ ಸಂಘದ ಪದಾಧಿಕಾರಿಗಳು ಭಾಗವಹಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net