ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಗೆ ಆಗ್ರಹ

13-RNR-04
Published on

ಹಾವೇರಿ: ಚಳಿಗಾಲದ ಅಧಿವೇಶನ ವೇಳೆ ಗುತ್ತಿಗೆದಾರರು ನಡೆಸಿದ ಹೋರಾಟದ ಫಲವಾಗಿ ಲೋಕೋಪಯೋಗಿ ಇಲಾಖೆಯ ಜಿಲ್ಲೆಯ ಗುತ್ತಿಗೆದಾರರ ಸುಮಾರು 33 ಕೋಟಿ ರೂ. ಪೈಕಿ ಮಾರ್ಚ್​ ಅಂತ್ಯಕ್ಕೆ 16 ಕೋಟಿ ರೂ. ಬಿಡುಗಡೆಗೊಳಿಸಿ ಸಚಿವ ಸತೀಶ ಜಾರಕಿಹೊಳಿ ಗುತ್ತಿಗೆದಾರರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷಗಳ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಪಾರದರ್ಶಕತೆ ಕೊರತೆಯಿಂದ ಕೆಲ ಗುತ್ತಿಗೆದಾರರು ಆತ್ಮಹತ್ಯೆಯ ದಾರಿ ಹಿಡಿದಿದ್ದರು. ಇದೀಗ ಸಣ್ಣ ಗುತ್ತಿಗೆದಾರರಿಗೆ ಶೇ.50ರಷ್ಟು ಮೊತ್ತ ಬಿಡುಗಡೆ ಮಾಡಿದ್ದು, ದೊಡ್ಡ ಗುತ್ತಿಗೆದಾರರ ಬಾಕಿಯನ್ನು ಶೇಕಡಾವಾರು ನಿಗದಿ ಮಾಡಿ ಪಾರದರ್ಶಕವಾಗಿ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ. ಈ ಹಿಂದೆ ಸಚಿವರು, ಹಿರಿಯ ಅಧಿಕಾರಿಗಳನ್ನು ಪದೇ ಪದೇ ಭೇಟಿ ಮಾಡಿ ಹಣ ಬಿಡುಗಡೆಗೆ ಒತ್ತಾಯಿಸಬೇಕಾಗಿತ್ತು. ಆದರೆ ಈ ಬಾರಿ ಸಚಿವ ಸತೀಶ ಜಾರಕಿಹೊಳಿ ಸ್ವತಃ ಮುತುವಜಿರ್ ವಹಿಸಿ ಗುತ್ತಿಗೆದಾರರ ಬಾಕಿ ಬಿಡುಗಡೆಗೆ ಕ್ರಮವಹಿಸಿರುವುದು ಸಂತಸ ನೀಡಿದೆ ಎಂದರು.

ಇನ್ನು ಆರ್​ಡಿಪಿಆರ್​, ನೀರಾವರಿ ನಿಗಮ ಮತ್ತು ಎಸ್​ಡಿಪಿ , ಟಿಎಸ್​ಪಿಗಳ ಅನುದಾನದಲ್ಲಿ ಕೋಟ್ಯಂತರ ರೂ. ಬಾಕಿ ಉಳಿದುಕೊಂಡಿದ್ದು ಇದರಿಂದ ಗುತ್ತಿಗೆದಾರರ ನೋವಿನಲ್ಲಿದ್ದಾರೆ. ಅವರು ಡೋಲಾಯಮಾನ ಪರಿಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ. ಎಸ್​ಡಿಪಿ, ಟಿಎಸ್​ಪಿಗಳ ಅನುದಾನದಲ್ಲಿ ಸಾಕಷ್ಟು ಬಾಕಿ ಉಳಿದುಕೊಂಡಿದ್ದು, ಈ ಮೊತ್ತ ಪಾವತಿಗೆ ಮುಖ್ಯ ಇಂಜಿನಿಯರ್​ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಲ್ಲಿ ಮನವಿಗೆ ತೆರಳಿದಾಗ ಅವರು ಈ ಎಸ್​ಡಿಪಿ, ಟಿಎಸ್​ಪಿಗಳ ಅನುದಾನದ ಹೆಡ್​ ಬಂದ್​ ಆಗಿದೆ ಎಂಬ ಆಘಾತಕಾರಿ ಸಂಗತಿ ತಿಳಿಸಿದ್ದು, ಇದರಿಂದ ಸಣ್ಣ ಗುತ್ತಿಗೆದಾರರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಮಾರ್ಚ್​ ಅಂತ್ಯಕ್ಕೆ ಲೋಕೋಪಯೋಗಿ ಇಲಾಖೆಯಲ್ಲಿ ಅಂದಾಜು 40&45ಕೋಟಿ, ಆರ್​ಡಿಪಿಆರ್​126 ಕೋಟಿ, ಕೆಎನ್​ಎನ್​ಎಲ್​ 300&400 ಕೋಟಿ, ಎಸ್​ಡಿಪಿ-ಟಿಎಸ್​ಪಿ 17 ಕೋಟಿ ಹೀಗೆ ವಿವಿಧ ಹೆಡ್​ಗಳಲ್ಲಿ ಕೋಟ್ಯಂತರ ಹಣ ಬಾಕಿ ಉಳಿದುಕೊಂಡಿದೆ ಎಂದರು.

ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸುತ್ತಿರುವುದು ಒಡೆದು ಆಳುವ ನೀತಿಯಾಗಿದೆ. ಇದನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ಎಲ್ಲ ಗುತ್ತಿಗೆದಾರರು ಒಂದೇ ಎಂದು ಭಾವಿಸಿ ಗುತ್ತಿಗೆ ನೀಡಬೇಕು ಮತ್ತು ಇದರಲ್ಲಿನ ಮೀಸಲಾತಿಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ಗುತ್ತಿಗೆದಾರರಾದ ಸಂತೋಷ ಹಿರೇಮಠ, ಅಶೋಕ ಬಣಕಾರ, ಕುಮಾರ ಹತ್ತಿಕಾಳ, ನಾಗರಾಜ ಆನ್ವೇರಿ, ಪ್ರಕಾಶ ಹಿರೇಕೆರೂರ, ಆರ್​.ಎಂ. ಗಂಗೋಳ, ನಾಗರಾಜ ಮಠದ, ಅರುಣ ಗಂಗೋಳ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net