ದ್ವಿಭಾಷಾ ನೀತಿಗೆ ಜಾರಿಗೆ ಒತ್ತಾಯ

karave protest
ಕೋಲಾರ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on

ಕೋಲಾರ: ರಾಜ್ಯದಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ವೇದಿಕೆಯ ಜಿಲ್ಲಾಧ್ಯಕ್ಷ ಮೇಡಿಹಾಳ ರಾವೇಂದ್ರ ಮಾತನಾಡಿ, ಶೈಕ್ಷಣಿಕ ಪಠ್ಯ ಕ್ರಮದಲ್ಲಿ ಸಾಧಾರಣೆ ಕ್ರಮ ತರುವುದನ್ನು ಸ್ವಾಗತಿಸುತ್ತೇವೆ. ಆದರೆ ಭಾಷೆಗೆ ಧಕ್ಕೆಯುಂಟು ಮಾಡುವ ತೀರ್ಮಾನಗಳನ್ನು ಸರ್ಕಾರ ಕೈಬಿಡಬೇಕು ಎಂದು ಕೋರಿದರು.

2024ರ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 90,794 ಮಂದಿ ಹಾಗೂ 2025ರಲ್ಲಿ 1.2 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಿಂದಿಯಲ್ಲಿ ಅನುತ್ತೀರ್ಣರಾಗಿದ್ದಾರೆ. ಇದು ಮಕ್ಕಳ ಶೈಕ್ಷಣಿಕ ಪ್ರಗತಿಯ ಮೇಲೆ ಬಹಳ ಪರಿಣಾಮ ಬೀರಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತ್ರಿಭಾಷಾ ಸೂತ್ರ ಕುರಿತು ರಾಷ್ಟ್ರಕವಿ ಕುವೆಂಪು ಅವರು ಹಿಂದೆಯೇ ತೀಕ್ಷ್ಣವಾದ ವಿರೋಧ ಸಾರಿದ್ದರು. ಸಾಂಸತಿಕ ಮತ್ತು ಭಾಷಿಕ ಅಸ್ಮಿತೆಯಲ್ಲಿ ಈ ನೆಲದ ನುಡಿಯಾದ ಕನ್ನಡವು ಕೇಂದ್ರ ಸ್ಥಾನವನ್ನು ಹೊಂದಿದೆ. ಬದಲಾದ ಕಾಲಘಟ್ಟದಲ್ಲಿ ಇಂಗ್ಲಿಷ್​ ಭಾಷೆಯು ಜಾಗತಿಕ ವ್ಯವಹಾರಗಳಿಗೆ, ಉನ್ನತ ಶಿಕ್ಷಣ ಮತ್ತು ವೃತ್ತಿ ನಿರ್ವಹಣೆಗೆ ಅಗತ್ಯವಾಗಿದ್ದು, ಇದನ್ನು ಕಲಿಯುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದೆ. ಆದರೆ, ಹಿಂದಿಯನ್ನು ಕಡ್ಡಾಯವಾಗಿ ಓದಿಸುವುದರಿಂದ ವಿದ್ಯಾರ್ಥಿಗಳಿಗೆ ಲಾಭವಿಲ್ಲ ಎಂದು ಹೇಳಿದರು.

ತಮಿಳುನಾಡು ಸರ್ಕಾರವು 1968ರಿಂದಲೇ ತ್ರಿಭಾಷಾ ನೀತಿಯನ್ನು ತಿರಸ್ಕರಿಸಿ ತಮಿಳು ಮತ್ತು ಇಂಗ್ಲಿಷ್​ ಭಾಷೆೆ ಒಳಗೊಂಡ ದ್ವಿಭಾಷಾ ನೀತಿಯನ್ನು ಜಾರಿಗೆ ತಂದಿದೆ. ಮಹಾರಾಷ್ಟ್ರದಲ್ಲೂ ಸಹ ದ್ವಿಭಾಷಾ ನೀತಿಯನ್ನು ಅನುಸರಿಸುತ್ತಿದ್ದು, ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಂಡಿವೆ ಎಂದು ತಿಳಿಸಿದರು.

ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್​ ಭಾಷೆೆಗಳನ್ನು ಕಡ್ಡಾಯಗೊಳಿಸುವ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು. ತೃತೀಯ ಭಾಷೆಯಾದ ಹಿಂದಿಯನ್ನು ಪಠ್ಯಕ್ರಮದಿಂದ ಹೊರಗಿಡಬೇಕು. ರಾಜ್ಯ ಮತ್ತು ಕೇಂದ್ರೀಯ ಶಿಕ್ಷಣ ವ್ಯವಸ್ಥೆಗಳಾದ ಸಿಬಿಎಸ್​ಇ, ಐಸಿಎಸ್​ಇ ಶಾಲೆಗಳಿಗೆ ಏಕರೂಪದ ದ್ವಿಭಾಷಾ ನೀತಿ ಜಾರಿಗೊಳಿಸಬೇಕು. ಸಿಬಿಎಎಸ್​ಇ, ಐಸಿಎಸ್​ಇ ಶಾಲೆಗಳಲ್ಲೂ ಪ್ರಥಮ ಭಾಷೆಯಾಗಿ ಕನ್ನಡವನ್ನೇ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರಭಟನೆಯಲ್ಲಿ ವೇದಿಕೆಯ ಮಹಿಳಾ ಟಕದ ಅಧ್ಯೆ ಲತಾಬಾಯಿ ಮಾಡಿಕ್​, ಜಿಲ್ಲಾ ಪದಾಧಿಕಾರಿಗಳಾದ ವಿ.ಮುನಿರಾಜು, ವಿವಿಧ ತಾಲೂಕು ಅಧ್ಯಕ್ಷರಾದ ಮಾಲೂರು ಎಂ.ಶ್ರೀನಾವಾಸ, ಕೋಲಾರ ಶಶಿಕುಮಾರ, ಬಂಗಾರಪೇಟೆ ರಾಮಪ್ರಸಾದ್​, ಮೆಹಬೂಬ್​, ಡಿ.ವಿ.ಮಂಜುನಾಥ, ಹುಸೇನ್​, ಜೆ.ಜಿ.ನೇತ್ರ, ಲೀಲಾವತಿ , ಜಯಮ್ಮ, ಸುಮಾ, ಅಶ್ವಿನಿ, ಭಾಗ್ಯಾ ಗಣೇಶ್​, ಕೆ.ನವೀನ್​, ಸಂತೋಷ್​, ರಾಮಕೃಷ್ಣಪ್ಪ, ರಂಜಿತ್​ ಇದ್ದರು.

ಬಾಕ್ಸ್​...

* ಸದನದಲ್ಲಿ ಧ್ವನಿ ಎತ್ತುವ ಭರವಸೆ

ಕರವೇ ಕಾರ್ಯಕರ್ತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಅವರು, ಕಾರ್ಯಕರ್ತರ ಸಮಸ್ಯೆ ಆಲಿಸಿದರು. ತ್ರಿ ಭಾಷಾ ನೀತಿ ಜಾರಿ ವಿರುದ್ಧ ಧ್ವನಿ ಎತ್ತಲಾಗುವುದು. ಆ ಮೂಲಕ ಕನ್ನಡಕ್ಕೆ ಧಕ್ಕೆಯಾಗದಂತೆ ಎಚ್ಚರವಹಿಸಿ, ದ್ವಿ ಭಾಷಾ ನೀತಿ ಜಾರಿಗೆ ಮುಂದಿನ ಅಧಿವೇಶನದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net