

ಬೆಂಗಳೂರು: ಮುಡಾ ಪರಿಹಾರ ರೂಪದಲ್ಲಿ ನೀಡಿದ್ದ ಬದಲಿ 14 ನಿವೇಶನಗಳನ್ನು ಸಿಎಂ ಸಿದ್ದರಾಮಯ್ಯನವರ ಪತ್ನಿ ಮುಡಾಕ್ಕೆ ವಾಪಸ್‌ಗೆ ನಿರ್ಧರಿಸಿದ್ಧಾರೆ. ಆದರೂ ಸಿಎಂ ರಾಜೀನಾಮೆ ಕೇಳುವ ಬಿಜೆಪಿಯವರಿಗೆ ಇದು ಬಿಟ್ಟು ಬೇರೆ ಕೆಲಸವಿಲ್ಲವೆಂದು ಸ್ವಪಕ್ಷದವರ ವಿರುದ್ಧವೇ ಶಾಸಕ ಎಸ್.ಟಿ.ಸೋಮಶೇಖರ್ ವಾಗ್ದಾಳಿ ಮಾಡಿದರು.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಮುಡಾದಲ್ಲಿ 50:50 ಅನುಪಾತದಂತೆ ಸಿಎಂ ಪತ್ನಿಯೊಬ್ಬರೇ ನಿವೇಶನಗಳನ್ನು ಪಡೆದಿಲ್ಲ. ಬಿಜೆಪಿಯವರು ತಗೊಂಡಿಲ್ಲವೆ ? ನೂರಾರು ಜನರು ಈ ತರಹ ನಿವೇಶನಗಳನ್ನು ಪಡೆದಿದ್ದಾರೆ ಎಂದರು.
ಸರ್ಕಾರದ ಆದೇಶದಂತೆ ಮುಡಾ ಆಡಳಿತ ಮಂಡಳಿ ಸಭೆಯಲ್ಲಿ 14 ನಿವೇಶನಗಳ ಹಂಚಿಕೆಗೆ ಅನುಮೋದಿಸಲಾಗಿದೆ. ತಮ್ಮ ಯಜಮಾನರಿಗೆ ಕಿರಿಕಿರಿಯಾಗುತ್ತದೆ ಎಂದು ಅರಿತು ಸಿಎಂ ಪತ್ನಿ ವಾಪಸ್ ಕೊಟ್ಟಿದ್ದಾರೆ. ತಡವಾಗಿರಬಹುದು, ಆದರೂ ಪರವಾಗಿಲ್ಲ ವಾಪಸ್ ಕೊಟ್ಟಿದ್ದಾರೆ ಎಂದು ಎಸ್.ಟಿ.ಸೋಮಶೇಖರ್ ಸಮರ್ಥಿಸಿಕೊಂಡರು.
ನಾಲ್ಕು ದಶಕಗಳ ಕಾಲ ಒಂದು ಚುಕ್ಕೆಯಿಲ್ಲದೆ ಸಿಎಂ ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿದ್ದು, ಅವರನ್ನೇ ಬಿಜೆಪಿ ಗುರಿ ಮಾಡುತ್ತಿರುವುದು ಸರಿಯಲ್ಲ. ಮೊದಲಿಗೆ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ ಮಾಡಿದ ಆರೋಪಗಳಿಗೆ ಬಿಜೆಪಿಯವರು ಉತ್ತರ ನೀಡಲಿ ಎಂದು ಸೆಡ್ಡು ಹೊಡೆದರು.
ಕಾನೂನು ಪ್ರಕಾರವೇ ಸಿದ್ದರಾಮಯ್ಯ ಪತ್ನಿಗೆ ಮುಡಾ 14 ನಿವೇಶನಗಳನ್ನು ಹಂಚಿದೆ. ಇದು, ಬಿಜೆಪಿ ಸರ್ಕಾರವಿದ್ದಾಗಲೇ ಆದ ತೀರ್ಮಾನ. ಅಧಿಕಾರದಲ್ಲಿದ್ದಾಗಲೇ ಇದನ್ನು ಪರಿಶೀಲಿಸಿ ನಿವೇಶನಗಳನ್ನು ವಾಪಸ್ ಪಡೆದುಕೊಳ್ಳಬಹುದಿತ್ತಲ್ಲ ಎಂದು ಎಸ್.ಟಿ.ಸೋಮಶೇಖರ್ ತಿವಿದರು.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುತ್ತಿರುವ ಬಗ್ಗೆ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಅವರು ಯಾವ ಪಕ್ಷದಲ್ಲಿದ್ದಾರೆ ಎಂದು ಸದ್ಯದಲ್ಲೇ ತೋರಿಸಿಕೊಡುತ್ತೇವೆ. - ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ.