ಜಾತಿ ಜನಗಣತಿ ವರದಿ ಅಂಗೀಕರಿಸಿ ಬಿಡುಗಡೆಗೆ ಒತ್ತಾಯ | Emotional thinking is wrong

Backward leaders
Published on

ಬೆಂಗಳೂರು: ಜಾತಿ ಜನಗಣತಿ ಎಂದು ಕರೆಯಲ್ಪಡುವ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಬೇಕು. ಬಿಡುಗಡೆ ಮಾಡಿ ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಪೂರ್ವಕವಾಗಿ ಆಡಳಿತ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ನಾಯಕರು ಮನವಿ ಮಾಡಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಚಿವ ಎಚ್.ಎಂ.ರೇವಣ್ಣ, ಶಾಸಕರಾದ ಎಂ.ಆರ್.ಸೀತಾರಾಮ್, ಉಮಾಶ್ರೀ, ನಾಗರಾಜಯಾದವ್, ಮಾಜಿ ಶಾಸಕ ಪಿ.ಆರ್.ರಮೇಶ್ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದರು.

ರಾಜ್ಯದಲ್ಲಿ ಮನೆ ಮನೆಗೆ ಭೇಟಿ ನೀಡಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಮತ್ತು ಇತರೆ ಕ್ಷೇತ್ರಗಳಿಗೆ ಅನ್ವಯಿಸುವ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿದೆ.

ಸಮೀಕ್ಷೆ ಸಂದರ್ಭದಲ್ಲಿ ಕೇಳಲಾದ 54 ಮಾಹಿತಿಗಳ ಪೈಕಿ ಜಾತಿಯು ಒಂದು ಅಂಶವಾಗಿದೆ. ಜನರ ಕಲ್ಯಾಣ ಕಾರ್ಯಕ್ರಮಗಳು, ಸಮಾನತೆ, ಸಾಮಾಜಿಕ ನ್ಯಾಯ ಒದಗಿಸಲು ಈ ವರದಿ ಅಡಿಪಾಯ ಹಾಕಲಿದ್ದು, ಯಾವುದೇ ಸಮುದಾಯಗಳಲ್ಲಿ ಆತಂಕ ಅನಗತ್ಯವೆಂದರು.

ಪರಿಶೀಲಿಸಿ, ಪರಿಷ್ಕರಣೆಗೆ ಅವಕಾಶ

ವರದಿಯ ವಿವರಗಳು ಅಧಿಕೃತವಾಗಿ ಬಹಿರಂಗವಾದ ನಂತರ ಪರಿಶೀಲಿಸಿ, ಲೋಪದೋಷಗಳು ಕಂಡು ಬಂದರೆ ಸರಿಪಡಿಸಬೇಕು ಎಂದು ಕೋರಲು ಅವಕಾಶವಿದೆ. ಇದೇ ವರದಿ ಅಂತಿಮವಲ್ಲ, ಇದು ತೀರ್ಪು ಕೂಡ ಅಲ್ಲ. ವಾಸ್ತವಿಕ ನೆಲೆಗಟ್ಟಿನಲ್ಲಿ ಪರಿಷ್ಕರಿಸಬಹುದಾಗಿದ್ದು, ಭಾವನಾತ್ಮಕವಾಗಿ ಯೋಚಿಸಿ ಪ್ರಚೋದಿಸುವುದು ಸಲ್ಲದು ಎಂದು ಮುಖಂಡರು ಆಕ್ಷೇಪಿಸಿದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಕುರಿತು ಕಾಂಗ್ರೆಸ್ ಪಕ್ಷ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಆಶ್ವಾಸನೆ ನೀಡಿದೆ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಈ ವಿಚಾರದಲ್ಲಿ ಸ್ಪಷ್ಟತೆಯಿದೆ ಎಂದರು.

ಎಐಸಿಸಿ ಅಧಿವೇಶನದಲ್ಲಿ ಚರ್ಚೆಯಾಗಿದ್ದು, ರಾಜ್ಯ ಸರ್ಕಾರ ವರದಿ ಜಾರಿ ನಿಟ್ಟಿನಲ್ಲಿ ಇಟ್ಟಿರುವ ಹೆಜ್ಜೆ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು. ಸುದ್ದಿಗೋಷ್ಠಿಗೆ ಸಚಿವರಾದ ಮಧುಬಂಗಾರಪ್ಪ, ಸಂತೋಷ ಲಾಡ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಗೈರು ಹಾಜರಾಗಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net