₹ 20000 ಕೋಟಿ ಬರ ಪರಿಹಾರಕ್ಕೆ ಬೇಡಿಕೆ!

ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿದ ಡಿಸಿಎಂ ಡಾ.ಜಿ. ಪರಮೇಶ್ವರ್, ರಾಜ್ಯದಲ್ಲಿ ಬರದಿಂದ 62 ಸಾವಿರ ಕೋಟಿ ರೂ. ಮೌಲ್ಯದ ಬೆಳೆ ನಷ್ಟ, 226 ಬರಪೀಡಿತ ತಾಲೂಕುಗಳಿಗೆ ಆರ್ಥಿಕ ನೆರವು ಬಿಡುಗಡೆಗೆ ಒತ್ತಾಯ
PARAM
ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್
Published on: 

ಬೆಂಗಳೂರು: ಭೀಕರ ಬರ ಪರಿಸ್ಥಿತಿ ಎದುರಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎ್) ಅಡಿ ಕರ್ನಾಟಕಕ್ಕೆ 20,585.73 ಕೋಟಿ ರೂ. ಪರಿಹಾರ ಕೋರಿ ಪ್ರಧಾನಿಗೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪತ್ರ ಬರೆದಿದ್ದಾರೆ.

ಪ್ರಧಾನಿ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ಗೆ ಪ್ರತ್ಯೇಕ ಪತ್ರ ಬರೆದಿರುವ ಪರಮೇಶ್ವರ್, ರಾಜ್ಯದಲ್ಲಿನ ಬರ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ್ದಾರೆ.

2026ರ ನೈಋತ್ಯ ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ಶೇ.35 ಮಳೆ ಕೊರತೆಯಾಗಿದೆ. ವಾಡಿಕೆಯಂತೆ 852 ಮಿ.ಮೀ. ಮಳೆಯಾಗಬೇಕಿದ್ದು ಕೇವಲ 551 ಮಿ.ಮೀ. ಮಳೆಯಾಗಿದೆ. ಇದು 1956 ರಿಂದೀಚೆಗೆ ದಾಖಲಾದ 2ನೇ ಅತ್ಯಂತ ಕಡಿಮೆ ಹಾಗೂ 1901 ರಿಂದೀಚೆಗೆ ದಾಖಲಾದ 7ನೇ ಅತ್ಯಂತ ಕಡಿಮೆ ಮುಂಗಾರು ಮಳೆಯಾಗಿದೆ ಎಂದು ತಿಳಿಸಿದ್ದಾರೆ.

ರೈತರ ಹಿತಾಸಕ್ತಿ ಮುಖ್ಯ ಕೇಂದ್ರ ಅಂತರ ಸಚಿವಾಲಯಗಳ ಅಧ್ಯಯನ ತಂಡವು ಅ.3 ರಿಂದ 6 ರವರೆಗೆ ಕರ್ನಾಟಕಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲನೆ ನಡೆಸಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆ ಆಶಯದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ಪರಮೇಶ್ವರ್ ಒತ್ತಾಯಿಸಿದ್ದಾರೆ.

ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರವು 20,585.73 ಕೋಟಿ ರೂ.ಕೇಂದ್ರದ ನೆರವು ಕೋರಿ ಸಮಗ್ರ ಮನವಿ ಪತ್ರವನ್ನು ಸಲ್ಲಿಸಿದೆ. ಇದರಲ್ಲಿ ಬೆಳೆ ಹಾನಿಯ ಪರಿಹಾರ ಸಹಾಯಧನಕ್ಕಾಗಿ 6,128.70 ಕೋಟಿ ರೂ., 61.91 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಜೀವನೋಪಾಯ ಪರಿಹಾರವಾಗಿ 12,146.99 ಕೋಟಿ ರೂ., ಕುಡಿಯುವ ನೀರಿನ ಪೂರೈಕೆಗಾಗಿ 1,727 ಕೋಟಿ ರೂ. ಹಾಗೂ ಪಶುಸಂಗೋಪನೆ ಮತ್ತು ಜಾನುವಾರುಗಳ ಸಂರಕ್ಷಣೆಗಾಗಿ 583.04 ಕೋಟಿ ರೂ. ನೆರವು ಕೋರಲಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ರೈತರಿಗೆ ದಿನಕ್ಕೆ 327 ರೂ. ನಂತೆ 60 ದಿನಗಳ ಅವಧಿಗೆ ಜೀವನೋಪಾಯ ಪರಿಹಾರವನ್ನು ಲೆಕ್ಕಹಾಕಲಾಗಿದೆ. ಜಾನುವಾರುಗಳ ರಕ್ಷಣೆಗಾಗಿ 476 ಗೋಶಾಲೆಗಳು ಮತ್ತು 583 ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಲು ಸಹ ಕೇಂದ್ರದ ನೆರವು ಬೇಕಾಗಿದೆ. ಬೆಳೆ ಹಾನಿಯ ಪರಿಹಾರ ಸಹಾಯಧನ ನಿರ್ಧರಿಸಲು ಈಗಲೂ 2015-16ರ ಹಳೆಯ ಕೃಷಿ ಗಣತಿಯ ಅಂಕಿ ಅಂಶಗಳನ್ನು ಬಳಸುತ್ತಿರುವುದು ಸರಿಯಾದ ಮಾರ್ಗವಲ್ಲ. ಇದರಿಂದ ರಾಜ್ಯಕ್ಕೆ 1,669.50 ಕೋಟಿ ರೂ. ನೆರವಿನ ಕೊರತೆಯಾಗುವ ಸಾಧ್ಯತೆಯಿದೆ ಎಂದು ಪರಮೇಶ್ವರ್ ಕಳವಳ ವ್ಯಕ್ತಪಡಿಸಿದ್ದಾರೆ.

ಪೌಷ್ಟಿಕ ಆಹಾರಕ್ಕೂ ನೆರವು ಬೇಕು ಬರಪೀಡಿತ ತಾಲೂಕುಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯ ಅವಧಿಯಲ್ಲಿಯೂ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಪಿಎಂ ಪೋಷಣ್ ಯೋಜನೆಯಡಿ ಹೆಚ್ಚುವರಿಯಾಗಿ 427.20 ಕೋಟಿ ರೂ. ನೆರವು ಕೋರಿದ್ದಾರೆ. ಅದೇ ರೀತಿ, ದುರ್ಬಲ ವರ್ಗದ ಫಲಾನುಭವಿಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದಡಿ 70.96 ಕೋಟಿ ರೂ. ನೆರವು ಒದಗಿಸುವಂತೆ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನೇನಿದೆ?

* 226 ತಾಲೂಕುಗಳು ಬರಪೀಡಿತವಾಗಿವೆ

* ರಾಜ್ಯ ಸರ್ಕಾರ ತಾಲೂಕು ೋಷಿಸಿದೆ

* ಒಟ್ಟು 57.93 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿ

* 4.01 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ನಾಶ

* 62,481.88 ಕೋಟಿ ರೂ. ಆರ್ಥಿಕ ನಷ್ಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net