

ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮ ಪಂಚಾಯಿತಿಯ ವಾರ್ಡ್ ಸಂಖ್ಯೆ 2 (ಮೀಸಲು ಕ್ಷೇತ್ರ)ರಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಆರ್.ರೇಖಾ ಅವರ ಆಯ್ಕೆಯನ್ನು ಅಸಿಂಧುಗೊಳಿಸಲಾಗಿದೆ. ಹೀಗಾಗಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿ ವರ್ಗದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆ ಆಗ್ರಹಿಸಿದೆ.
ಆರ್.ರೇಖಾ ಅವರ ಮೂಲ ಹೆಸರು ರುಕ್ಸರ್ ಆಗಿದೆ. ಇವರ ತಂದೆ ರೆಹಮಾನ್ ಆಗಿದ್ದು, ಬೈಲಕುಪ್ಪೆಯಲ್ಲಿನ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಚುನಾವಣೆವರೆಗೂ ಈ ಮಾಹಿತಿ ಯಾರಿಗೂ ತಿಳಿದಿರಲಿಲ್ಲ. ಆದರೆ, ಚುನಾವಣೆ ದಿನದಂದು ಇವರು ಸುಳ್ಳು ಜಾತಿ ಪ್ರಮಾಣಪತ್ರ ನೀಡಿರುವುದು ಗಮನಕ್ಕೆ ಬಂದಿದೆ ಎಂದು ವೇದಿಕೆಯ ಪದಾಧಿಕಾರಿ ಸೀಗೂರು ವಿಜಯಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸಂಬಂಧ ನೀಡಿದ್ದ ದೂರಿನ ಅಡಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ತಂಡ ತನಿಖೆ ನಡೆಸಿದಾಗ ಸುಳ್ಳು ಜಾತಿ ಪ್ರಮಾಣಪತ್ರ ನೀಡಿರುವುದು ದೃಢವಾಗಿದೆ. ಹೀಗಾಗಿ ಸಂಬಂಧಪಟ್ಟ ತಹಸೀಲ್ದಾರ್, ರೆವಿನ್ಯೂ ಇನ್‌ಸ್ಪೆಕ್ಟರ್, ಗ್ರಾಮ ಲೆಕ್ಕಿಗರ ವಿರುದ್ಧ ಕ್ರಮ ಕೈಗೊಳ್ಳಬೇಕು. ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಅನಿತಾ ನಾರಾಯಣ್ ಅವರು ಚುನಾಯಿತರಾಗಿದ್ದಾರೆಂದು ಘೋಷಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಅನಿತಾ ನಾರಾಯಣ್, ಎಚ್.ಡಿ.ರಮೇಶ್, ಭೂತನಹಳ್ಳಿ ಶಿವಣ್ಣ, ಸಿ.ಜೆ. ರವಿ ಹಾಜರಿದ್ದರು.