

ಮದ್ದೂರು: ತಮಗೆ ಮಂಜೂರಾಗಿದ್ದ ಜಮೀನಿಗೆ ತೆರಳಲು ಹಾಗೂ ಅಲ್ಲಿ ವ್ಯವಸಾಯ ಮಾಡಲು ಕೆಲ ಸ್ಥಳಿಯರು ವಿರೋಧ ಮಾಡುತ್ತಿದ್ದಾರೆಂದು ಆರೋಪಿಸಿ ತಾಯಿ ಹಾಗೂ ಪುತ್ರ ತಾವು ಸಾಕಿದ್ದ ಎಮ್ಮೆಯೊಂದಿಗೆ ಪಟ್ಟಣದ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನೆ ನಡೆಸಿದ ನಾಗರಾಜು ಮಾತನಾಡಿ, ತಾಲೂಕಿನ ದುಂಡನಹಳ್ಳಿ ಗ್ರಾಮದಲ್ಲಿ ನಮ್ಮ ತಾತ ಕುಳ್ಳಲಿಂಗೇಗೌಡರ ಮಗ ಕೆಂಪೇಗೌಡ ಅವರಿಗೆ 1980 ಬಗರ್ ಹುಕುಂನಲ್ಲಿ ಜಮೀನು ಮಂಜೂರಾಗಿತ್ತು. ಈಗಲೂ 3.6 ಎಕರೆ ಜಮೀನು ನಮಗೆ ಸೇರಿದ್ದರೂ ಜಮೀನಿನ ಅಕ್ಕಪಕ್ಕದಲ್ಲಿರುವ ಕೆಲವರು ನಮಗೆ ನಮ್ಮ ಜಮೀನಿಗೆ ತೆರಳಲು ಹಾಗೂ ಅಲ್ಲಿ ಬೇಸಾಯ ಮಾಡಲು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಎಷ್ಟೋ ಬಾರಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಅರ್ಜಿ ಸಲ್ಲಿಸಲಾಗಿತ್ತು. ಅಲ್ಲದೆ ತಹಸೀಲ್ದಾರ್ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ಆದೇಶ ಬಂದಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಮಗೆ ಈ ಹಿಂದೆ ಬಗರ್‌ಹುಕುಂನಲ್ಲಿ ಮಂಜೂರಾಗಿರುವ ಜಮೀನನ್ನು ಹದ್ದುಬಸ್ತು ಮಾಡಿಸಿಕೊಟ್ಟು, ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ಸರ್ವೇಯರ್ ಸ್ಥಳಕ್ಕೆ ಆಗಮಿಸಿ ಒಂದು ವಾರದೊಳಗೆ ನಿಮ್ಮ ಜಮೀನಿಗೆ ಬಂದು ಅಳತೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಈ ವೇಳೆ ನಾಗರಾಜು ಅವರ ತಾಯಿ ಮರಿಯಮ್ಮ ಜತೆಗಿದ್ದರು.