ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯ

protest
ಮುದ್ದಿನಕೊಪ್ಪ ಟ್ರೀಪಾರ್ಕ್‌ನಲ್ಲಿ ಬಾಲಕಿ ಸಮೀಕ್ಷಾ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಹಾಗೂ ಆ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಬಾಹುಸಾರ ಕ್ಷತ್ರಿಯ ಮಹಾಜನ ಸಮಿತಿ ಪ್ರತಿಭಟನೆ ನಡೆಸಿತು. ಮುಖಂಡರಾದ ಟಿ.ವಿ.ಗಜೇಂದ್ರನಾಥ್, ಸತ್ಯನಾರಾಯಣ್, ವಿನಯ್ ತೇಲಕ್, ಸಂತೋಷ್ ಸಾಕ್ರೆ, ಸತ್ಯನಾರಾಯಣ್, ಟಿ.ಡಿ.ಮಂಜುನಾಥ್ ಇತರರಿದ್ದರು.
Published on

ಶಿವಮೊಗ್ಗ: ಮುದ್ದಿನಕೊಪ್ಪ ಟ್ರೀ ಪಾರ್ಕ್‌ನಲ್ಲಿ ಸಿಮೆಂಟ್‌ನಿಂದ ನಿರ್ಮಿಸಿದ್ದ ಜಿಂಕೆ ಕಲಾಕೃತಿ ಮುರಿದುಬಿದ್ದು ಬಾಲಕಿ ಸಮೀಕ್ಷಾ ಸಾವಿಗೀಡಾಗಿದ್ದು, ಈ ದುರಂತಕ್ಕೆ ಕಾರಣರಾದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಾಹುಸಾರ ಕ್ಷತ್ರಿಯ ಮಹಾಜನ ಸಮಿತಿ ಪ್ರಮುಖರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮುದ್ದಿನಕೊಪ್ಪ ಟ್ರೀ ಪಾರ್ಕ್‌ಗೆ ಗಾಂಧಿ ಬಜಾರ್‌ನ ಹರೀಶ್ ಅಂಭೋರೆ, ಲಕ್ಷ್ಮೀ ದಂಪತಿ ಪುತ್ರಿ ಸಮೀಕ್ಷಾಳನ್ನು ಕರೆದೊಯ್ದಿದ್ದರು. ಬಾಲಕಿ ಆಟವಾಡುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಶಿಥಿಲಗೊಂಡಿದ್ದ ಕಲಾಕೃತಿಯನ್ನು ಸಕಾಲದಲ್ಲಿ ಸರಿಪಡಿಸದೆ ಸಿಬ್ಬಂದಿ ಉದಾಸೀನ ತೋರಿದ್ದಾರೆ. ಇದರಿಂದಾಗಿ ಮಗು ಜೀವ ಕಳೆದುಕೊಳ್ಳುವಂತಾಯಿತು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಬಾಲಕಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ನೋವಿನ ಘಟನೆಯಲ್ಲೂ ಪಾಲಕರು ಪುತ್ರಿಯ ನೇತ್ರದಾನ ಮಾಡಿದ್ದಾರೆ. ಆ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಸಮಿತಿ ಅಧ್ಯಕ್ಷ ಟಿ.ವಿ.ಗಜೇಂದ್ರನಾಥ್, ಪ್ರಮುಖರಾದ ಟಿ.ಡಿ.ಮಂಜುನಾಥ್, ಸತ್ಯನಾರಾಯಣ್, ವಿನಯ್ ವಿ. ತಾಂದ್ಲೆ, ನವೀನ್ ಸಾಕ್ರೆ, ಸಂತೋಷ್ ಸಾಕ್ರೆ, ವಿನಯ್ ತೇಲ್ಕರ್ ಮುಂತಾದವರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net