

ಬೆಂಗಳೂರು: ಆನ್‌ಲೈನ್ ಗ್ರಾಹಕರು ಹಿಂತಿರುಗಿಸಿದ ಮೊಬೈಲ್‌ಗಳನ್ನು ಕಂಪನಿಗೆ ತಲುಪಿಸದೆ ಕಳವು ಮಾಡುತ್ತಿದ್ದ ಡೆಲಿವರಿ ಬಾಯ್‌ನ್ನು ಬೆಳ್ಳಂದೂರು ಪೊಲೀಸರು ಬಂಧಿಸಿ 9 ಲಕ್ಷ ರೂ. ಮೌಲ್ಯದ 44 ಮೊಬೈಲ್ ಜಪ್ತಿ ಮಾಡಿದ್ದಾರೆ. ಟಿ. ಶೆಟ್ಟಿಹಳ್ಳಿ ನಿವಾಸಿ ಅಲೋಕ್ ಚೈನಾ ಬಂಧಿತ.
ಒಡಿಶಾ ಮೂಲದ ಅಲೋಕ್, ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಡೆಲಿವರಿ ಡಾಟ್‌ಕಾಮ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಗ್ರಾಹಕರು ಆನ್‌ಲೈನ್‌ನಲ್ಲಿ ಮೊಬೈಲ್ ಬುಕ್ ಮಾಡಿ ಕಾರಣಾಂತರಗಳಿಂದ ರದ್ದುಪಡಿಸಿದಾಗ ವಾಪಸ್ ಕಂಪನಿಗೆ ನೀಡುತ್ತಿರಲಿಲ್ಲ.
ತಾನೇ ಇಟ್ಟುಕೊಂಡು ಕಂಪನಿಗೆ ಸುಳ್ಳು ಮಾಹಿತಿ ನೀಡುತ್ತಿದ್ದ. ಇತ್ತೀಚೆಗೆ ಗೋದಾಮು ಪರಿಶೀಲನೆ ಮಾಡಿದಾಗ ಲೆಕ್ಕಪತ್ರದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಅಲೋಕ್ ಚೈನಾ ಕಳ್ಳತನ ಮಾಡಿರುವುದು ಬೆಳಕಿಗೆ ಬಂದು ಬೆಳ್ಳಂದೂರು ಠಾಣೆಗೆ ದೂರು ಸಲ್ಲಿಸಲಾಗಿತ್ತು. ಇದರ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.