

ಬೆಂಗಳೂರು: ಅತೀವೇಗವಾಗಿ ಬಂದು ರಸ್ತೆ ಹಂಪ್ಸ್ ಬಳಿ ಏಕಾಏಕಿ ಬೈಕ್‌ನ ಬ್ರೇಕ್ ಹಾಕಿದಾಗ ನಿಯಂತ್ರಣ ತಪ್ಪಿ ಹಾರಿಬಿದ್ದ ಅಮೆಜಾನ್ ಡೆಲಿವರಿ ಬಾಯ್ ಮೃತಪಟ್ಟಿದ್ದಾನೆ.
ಬೊಮ್ಮಸಂದ್ರ ನಿವಾಸಿ ಅಭಿಷೇಕ್(೨೬) ಮೃತ ಡೆಲಿವರಿ ಬಾಯ್. ಅಮೆಜಾನ್ ಕಂಪನಿಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ ಅಭಿಷೇಕ್, ಕೋನಪ್ಪ ಅಗ್ರಹಾರ ಜಂಕ್ಷನ್ ಕಡೆಯಿಂದ ಹೊಸೂರು ರಸ್ತೆ ಜಂಕ್ಷನ್ ಕಡೆ ಗುರುವಾರ ರಾತ್ರಿ ೧೧.೪೦ರ ಸುಮಾರಿಗೆ ತನ್ನ ಬೈಕ್‌ನಲ್ಲಿ ಹೋಗುತ್ತಿದ್ದ. ಮಾರ್ಗ ಮಧ್ಯೆ ಬೆರಟೇನ ಅಗ್ರಹಾರ ಮೆಟ್ರೋ ನಿಲ್ದಾಣ ಸಮೀಪ ರಸ್ತೆ ಹಂಪ್ ಇರುವುದು ಗಮನಿಸಿ ಕೂಡಲೇ ಬ್ರೇಕ್ ಹಾಕಿದ್ದಾನೆ. ಆಗ ನಿಯಂತ್ರಣ ತಪ್ಪಿ ಸುಮಾರು ೩೦ ಅಡಿ ದೂರ ಹಾರಿ ಬಿದ್ದಿದ್ದಾನೆ. ಪರಿಣಾಮ ತೀವ್ರರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡಿದ್ದ. ಕೂಡಲೇ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.