ಗ್ರಾಹಕನ ಮೇಲೆ ಹಲ್ಲೆ ನಡೆಸಿದ್ದ ಡೆಲಿವರಿ ಬಾಯ್ ಸೆರೆ

arrested
Published on

ಬೆಂಗಳೂರು: ವಿಳಾಸದ ವಿಚಾರಕ್ಕೆ ಗಲಾಟೆಯಾಗಿ ಗ್ರಾಹಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಜೆಪ್ಟೊ ಕಂಪನಿಯ ಡೆಲಿವರಿ ಬಾಯ್‌ನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.

ವಿಷ್ಣುವರ್ಧನ್ ಬಂಧಿತ ಆರೋಪಿ. ಗ್ರಾಹಕ ಶಶಾಂಕ್ ಅವರ ದೂರು ಆಧರಿಸಿ ಯುವಕನನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾರ್ಸಲ್ ತೆಗೆದುಕೊಳ್ಳಲು ಬಂದ ಮಹಿಳೆಯನ್ನು ತಪ್ಪು ವಿಳಾಸ ಏಕೆ ನೀಡಿದ್ದೀರಿ ಎಂದು ಪ್ರಶ್ನಿಸುತ್ತಿದೆ. ಈ ವಿಚಾರಕ್ಕೆ ನಮ್ಮ ಇಬ್ಬರ ಮಧ್ಯೆ ವಾಗ್ವಾದ ನಡೆಯುತ್ತಿತ್ತು. ಆಗ ಮಧ್ಯ ಪ್ರವೇಶಿಸಿ ಶಶಾಂಕ್ ಅವರು ನನ್ನ ಜತೆ ಅಸಭ್ಯವಾಗಿ ವರ್ತಿಸಿ, ಹಲ್ಲೆಗೆ ಮುಂದಾದರು. ಆಗ ಗಲಾಟೆಗೆ ವಿಕೋಪಕ್ಕೆ ತಿರುಗಿ ಹಲ್ಲೆ ನಡೆಸಿದ್ದೇನೆ ಹೊರತು ದುರದ್ದೇಶದಿಂದ ಹಲ್ಲೆ ಮಾಡಿಲ್ಲ ಎಂದು ವಿಷ್ಣುವರ್ಧನ್ ವಿಚಾರಣೆಗೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

ಕಣ್ಣಿನ ಎಡಭಾಗದ ಕೆಳಗೆ ಪೆಟ್ಟು ಬಿದ್ದಿದ್ದರಿಂದ ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ಶಶಾಂಕ್ ಚಿಕಿತ್ಸೆ ಪಡೆದಿರುವುದಾಗಿ ಹೇಳಿದ್ದಾರೆ. ಅದಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆ ಹಾಜರು ಪಡಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಾಜಿನಗರ ಕ್ಷೇತ್ರದ ಶಾಸಕ ಎಸ್.ಸುರೇಶ್ ಕುಮಾರ್ ಅವರು ಶಶಾಂಕ್ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ಘಟನೆಯು ಆಘಾತಕಾರಿ ಮತ್ತು ಒಪ್ಪುವಂತಹದಲ್ಲ. ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಸಹಕಾರ ನೀಡಲಾಗುವುದು. ಪೊಲೀಸ್ ಅಧಿಕಾರಿಗಳ ಜತೆ ಸಂಕರ್ಪದಲ್ಲಿದ್ದೇವೆ ಎಂದು ಜೆಪ್ಟೊ ಕಂಪನಿ ಹೇಳಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net