ಬೆಂಗಳೂರಿನಲ್ಲಿ ದಿನಸಿ ಡೆಲಿವರಿ ಮಾಡುವಾಗ ಬ್ರೆಜಿಲ್ ಮಾಡೆಲ್​ಗೆ ಕಿರುಕುಳ ; ಡೆಲಿವರಿ ಬಾಯ್ ಬಂಧನ| Arrested

ವಿಜಯವಾಣಿ - 2025-10-28T131226.144
Published on

ಬೆಂಗಳೂರು: ಬ್ರೆಜಿಲ್ ದೇಶದ​​ ಯುವತಿಯೊಬ್ಬರಿಗೆ ದಿನಸಿ ಡೆಲಿವರಿ ಕೊಡುವಾಗ ಫ್ಲಾಟ್​ನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಆನ್​ಲೈನ್ ದಿನಸಿ ವಿತರಣಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ 22 ವರ್ಷದ ಡೆಲಿವರಿ ಬಾಯ್​ ಒಬ್ಬನನ್ನು ಆರ್​ಟಿ ನಗರ ಪೊಲೀಸರು ಮಂಗಳವಾರ(ಅ. 28) ಬಂಧಿಸಿದ್ದಾರೆ(Arrested).

ಆರೋಪಿಯನ್ನು ಕುಮಾರ್ ರಾವ್ ಪವಾರ್ ಎಂದು ಗುರುತಿಸಲಾಗಿದೆ. ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದು, ಅರೆಕಾಲಿನ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹದಲ್ಲಿ ಇರಿಸಲಾಗಿದೆ ಎನ್ನಲಾಗಿದೆ.

ಘಟನೆಯ ಹಿನ್ನೆಲೆ

ಅ. 25ರಂದು ಬ್ರೆಜಿಲ್ ಯುವತಿ ನೀಡಿದ ದೂರಿನ ಪ್ರಕಾರ,  ಕಳೆದ ಎರಡು ತಿಂಗಳಿನಿಂದ ಬ್ರೆಜಿಲ್​ ದೇಶದ 21 ವರ್ಷದ ಯುವತಿ ಖಾಸಗಿ ಕಂಪನಿಯೊಂದರಲ್ಲಿ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆ ಕಂಪನಿಯೂ ಸುಲ್ತಾನಪಾಳ್ಯದಲ್ಲಿರುವ ಪ್ಲಾಟ್​ನಲ್ಲಿ ಈ ಯುವತಿ ಜೊತೆ ಕೆಲಸ ಮಾಡುತ್ತಿರುವ ಇನ್ನಿಬ್ಬರು ವಿದೇಶಿಯರಿಗೆ ವಸತಿಯನ್ನು ಒದಗಿಸಿ ಕೊಟ್ಟಿದೆ.

ಅ. 17ರಂದು ಮಧ್ಯಾಹ್ನ 3.30ಕ್ಕೆ ಯುವತಿ ಆನ್‌ಲೈನ್‌ನಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದಾಳೆ. ಮತ್ತು ಆರೋಪಿಯು ಆಕೆಯ ಫ್ಲಾಟ್‌ಗೆ ಬಂದು ವಿತರಣೆ ಮಾಡಲು ಬಂದಿದ್ದು,  ಮೊದಲ ಮಹಡಿಯಲ್ಲಿರುವ ಆಕೆಯ ಫ್ಲಾಟ್ ತಲುಪಿ ಡೋರ್‌ಬೆಲ್ ಬಾರಿಸಿದ್ದಾನೆ. ಮಹಿಳೆ ಬಾಗಿಲು ತೆರೆದಾಗ, ಅವನು ಅವಳೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಪಾರ್ಸೆಲ್ ನೀಡುವ ನೆಪದಲ್ಲಿ ಅವಳನ್ನು ಅನುಚಿತವಾಗಿ ಮುಟ್ಟಿದ್ದಾನೆ. ಘಟನೆಯಿಂದ ಆಘಾತಕ್ಕೊಳಗಾದ ಯುವತಿ ಆ ವ್ಯಕ್ತಿಯನ್ನು ಹೊರಗೆ ತಳ್ಳಿ ಬಾಗಿಲನ್ನು ಲಾಕ್ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಇತ್ತೀಚೆಗೆ ತನ್ನ ಜೊತೆಗೆ ಇರುವ ಫ್ಲಾಟ್​ಮೇಟ್​ಗಳಿಗೆ ಈ ಅನುಭವದ ಬಗ್ಗೆ ಹೇಳಿದ್ದು, ಅವರಿಗೂ ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದಾಳೆ. ಅವರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಘಟನೆ ನಡೆದಿದ್ದು ದೃಢವಾಗಿದ್ದು, ಬಳಿಕ ದೂರು ದಾಖಲಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net