

ನವದೆಹಲಿ: ಕಳೆದ ವಾರ ದೆಹಲಿಯಲ್ಲಿ ಛತ್ ಪೂಜೆ ಆಚರಣೆಗೂ ಮುನ್ನ ಪತ್ಪರ್ಗಂಜ್ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ ಯಮುನಾ ನದಿಯ(Yamuna River) ನೀರಿನ ಶುದ್ಧತೆಯನ್ನು ತೋರಿಸುವ ರೀಲ್ಸ್ ಮಾಡಲು ಹೋಗಿ ನದಿಗೆ ಬಿದ್ದಿದ್ದಾರೆ. ಇಂದು (ಅ. 28) ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
19 ಸೆಕೆಂಡುಗಳ ವೀಡಿಯೊದಲ್ಲಿ ಶಾಸಕ ರವೀಂದರ್ ಸಿಂಗ್ ಎರಡು ಬಾಟಲಿಗಳನ್ನು ಹಿಡಿದುಕೊಂಡು, ಪಾನಿ ಪೈಕ್ ದಿಖಾನಿ ಹೈ (ನೀರು ಕುಡಿದು ತೋರಿಸಬೇಕು) ಎಂದು ಹೇಳುವುದು ದಾಖಲಾಗಿದೆ. ಕೆಲವು ಸೆಕೆಂಡುಗಳ ಬಳಿಕ ನೇಗಿ ಮಂಡಿಯೂರಿ ಕುಳಿತಿದ್ದ ಸ್ಥಳದಿಂದ ಎದ್ದೇಳಲು ಪ್ರಯತ್ನಿಸುವಾಗ ಸಮತೋಲನ ಕಳೆದುಕೊಂಡು ನದಿಗೆ ಜಾರಿ ಬಿದ್ದಿದ್ದಾರೆ. ಅವರ ಬಳಿ ನಿಂತಿದ್ದ ವ್ಯಕ್ತಿಯೊಬ್ಬರು ಸಹಾಯ ಮಾಡಲು ಪ್ರಯತ್ನಿಸಿದರೂ ಅವರನ್ನು ಅವರನ್ನು ಎಳೆಯಲು ಸಾಧ್ಯವಾಗಿಲ್ಲ. ಮರದ ಕೊಂಬೆಯನ್ನು ಹಿಡಿದುಕೊಂಡು ಶಾಸಕರು ಹೊರಗೆ ಬಂದಿದ್ದಾರೆ.
ಎಕ್ಸ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಎಎಪಿ ಶಾಸಕ ಸಂಜೀವ್ ಝಾ,ರಾಷ್ಟ್ರ ರಾಜಧಾನಿಯ ಬಿಜೆಪಿ ನಾಯಕರಿಗೆ ಖಾಲಿ ಭರವಸೆಗಳನ್ನು ನೀಡುವುದು ಒಂದು ವೃತ್ತಿಯಾಗಿದೆ. ಅವರು ಸುಳ್ಳಿನ ಶಿಖರವನ್ನೂ ದಾಟಿದ್ದಾರೆ. ಬಹುಶಃ ಈ ಸುಳ್ಳು ಮತ್ತು ಸೋಗಿನ ರಾಜಕೀಯದಿಂದ ಬೇಸತ್ತು, ಯಮುನಾ ಮೈಯ್ಯಾ ಅವರನ್ನು ಸ್ವತಃ ತಮ್ಮ ಕಡೆಗೆ ಕರೆದಿರಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.
ಛತ್ ಪೂಜಾ ಆಚರಣೆಗಳು ಇಂದು ಮುಕ್ತಾಯಗೊಂಡ ಸಂದರ್ಭದಲ್ಲಿ, ಹಿಂದಿನ ಎಎಪಿ ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿ ಯಮುನಾ ನದಿಯ ಸ್ಥಿತಿಗತಿಗಳ ಬಗ್ಗೆ ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ಕಳೆದ ವಾರ ಎಎಪಿ ನಾಯಕ ಸೌರಭ್ ಭಾರದ್ವಾಜ್, ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಯಮುನಾ ನದಿ ಶುದ್ಧವಾಗಿದೆ ಎಂದು ಸಾಬೀತುಪಡಿಸಲು ಸವಾಲು ಹಾಕಿದ್ದರು. ಶುದ್ದವಾಗಿದ್ರೆ ಸಿಎಂ ರೇಖಾ ಗುಪ್ತಾ, ಪರ್ವೇಶ್ ವರ್ಮಾ ಅವರು ಅದನ್ನು ಕುಡಿದು ತೋರಿಸಬೇಕು ಎಂದು ಕಿಡಿಕಾರಿದ್ದರು. (ಏಜೆನ್ಸೀಸ್)