ಪ್ರತಿಯೊಬ್ಬರಿಗೂ ಗ್ಯಾರಂಟಿ ಯೋಜನೆಗಳನ್ನು ತಲುಪಿಸಿ

06 HANUR 1
ಹನೂರಿನ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಚಯ್ಯ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಉಮೇಶ್, ರಂಗಸ್ವಾಮಿ, ವಿಶ್ವನಾಥ್, ಶಂಕರ್, ಗೌಸಿಯಾ ಇತರರು ಇದ್ದರು.
Published on

ಹನೂರು: ಸಮಸ್ಯೆಗಳನ್ನು ಪರಿಹರಿಸುವುದರ ಮೂಲಕ ಅರ್ಹ ಪ್ರತಿಯೊಬ್ಬರಿಗೂ ಗ್ಯಾರಂಟಿ ಯೋಜನೆಗಳು ತಲುಪಬೇಕು. ಈ ಬಗ್ಗೆ ಅಗತ್ಯ ಮುತುವರ್ಜಿ ವಹಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಚಯ್ಯ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಅನುಪಾಲನಾ ವರದಿ ಪಡೆದು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದರ ಜತೆಗೆ ಉತ್ತಮ ಆಡಳಿತ ನೀಡುತ್ತಿದೆ. ಫಲಾನುಭವಿಗಳು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದು, ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ತಾಲೂಕಿನಲ್ಲಿ ಪಡಿತರ ವಿತರಣೆ, ಬಸ್ ಸೌಕರ್ಯ, ವಿದ್ಯುತ್ ಸೇರಿದಂತೆ ಇನ್ನು ಕೆಲವು ಸಮಸ್ಯೆಗಳು ಇವೆ. ಆದ್ದರಿಂದ ಆಯಾ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಮಸ್ಯೆಗಳನ್ನು ಪರಿಹರಿಸಬೇಕು. ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜನರಿಂದ ಯಾವುದೇ ರೀತಿಯಲ್ಲೂ ದೂರು ಬರಕೂಡದು ಎಂದು ಸೂಚಿಸಿದರು.

ಉದ್ಯೋಗ ಮೇಳ ಆಯೋಜಿಸಲೇಬೇಕು: ಕಳೆದ ಬಾರಿ ಆಯೋಜಿಸಿದ್ದ ಸಭೆಯಲ್ಲಿ ಉದ್ಯೋಗ ವಿನಿಮಯ ಇಲಾಖೆಯ ಅಧಿಕಾರಿಗೆ ಹನೂರಿನಲ್ಲಿ ಉದ್ಯೋಗ ಮೇಳವನ್ನು ಆಯೋಜಿಸುವಂತೆ ಸೂಚಿಸಲಾಗಿತ್ತು. ಆದರೆ ಯಾವುದೇ ಕ್ರಮವಾಗಿಲ್ಲದ ಪರಿಣಾಮ ಆಗಮಿಸಿದ್ದ ಕಚೇರಿಯ ನೌಕರ ಯಶವಂತ್ ಅವರನ್ನು ಅಧ್ಯಕ್ಷ ರಾಚಯ್ಯ ಅವರು ತೀವ್ರ ತರಾಟೆಗೆ ತೆಗೆದುಕೊಂಡರು. ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತ ನಿರುದ್ಯೋಗಿಗಳಿದ್ದಾರೆ. ಆದರೆ ಉದ್ಯೋಗ ಸಿಗದ ಪರಿಣಾಮ ಗುಳೆ ಹೋಗುವಂತಹ ಪರಿಸ್ಥಿತಿ ಇದೆ. ಆದ್ದರಿಂದ ಹನೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಲೇಬೇಕು. ಪ್ರತಿ ಗ್ರಾಮಗಳಲ್ಲೂ ಈ ಬಗ್ಗೆ ಪ್ರಚಾರ ಪಡಿಸಲಾಗುವುದು. ಅಗತ್ಯ ಮೂಲ ಸೌಕರ್ಯ ಒದಗಿಸಲು ಸಂಪೂರ್ಣ ಸಹಕಾರ ನೀಡಲಾಗುವುದು. ಹಾಗಾಗಿ ದಿನಾಂಕ ನಿಗದಿಗೊಳಿಸಿ ಈ ಬಗ್ಗೆ ತಿಳಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ಸಲ್ಲದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದೇ ವೇಳೆ ಸೆಸ್ಕ್ ಎಇಇ ರಂಗಸ್ವಾಮಿ ಅವರಿಂದ ಮಾಹಿತಿ ಪಡೆದ ತಾಪಂ ಇಒ ಉಮೇಶ್ ಮಾತನಾಡಿ, ತಾಲೂಕಿನ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಿದೆ. ಆದ್ದರಿಂದ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಸೂಚಿಸಿದರು. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮವಹಿಸುವುದಾಗಿ ರಂಗಸ್ವಾಮಿ ತಿಳಿಸಿದರು.

ಇನ್ನು ಸಭೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರ ಪಟ್ಟಿ ನೀಡುವಂತೆ, ಸಮರ್ಪಕವಾಗಿ ಪಡಿತರ ವಿತರಣೆಯಾಗುವಂತೆ ಹಾಗೂ ಗ್ರಾಮಗಳಲ್ಲಿ ಬಸ್ ನಿಲುಗಡೆಗೊಳಿಸುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಿಂದ ಒತ್ತಾಯ ಕೇಳಿಬಂತು. ಈ ಬಗ್ಗೆ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net