ಟ್ರಕ್​ ಹಿಂದೆ ನಿಂತಿದ್ದ ಕಾರಿಗೆ ಮತ್ತೊಂದು ಟ್ರಕ್ ಡಿಕ್ಕಿ​: ದೇವಸ್ಥಾನದಿಂದ ಮರಳುತ್ತಿದ್ದ ಯುವತಿ ದುರ್ಮರಣ

Delhi Girl
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಟ್ರಕ್​ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬಳು ದಾರುಣ ಸಾವಿಗೀಡಾಗಿದ್ದು, ಮತ್ತೊರ್ವ ಗಂಭೀರ ಗಾಯಗೊಂಡಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಮೃತ ಯುವತಿಯನ್ನು ಅಮನ್​ದೀಪ್​ ಕೌರ್​ (22) ಎಂದು ಗುರುತಿಸಲಾಗಿದೆ. ಉತ್ತರ ದೆಹಲಿಯ ಸಿವಿಲ್​ ಲೇನ್ಸ್​ ಏರಿಯಾದಲ್ಲಿ ಘಟನೆ ಸಂಭವಿಸಿದೆ. ಟ್ರಾಫಿಕ್​ ಸಿಗ್ನಲ್​ ವೇಳೆ ಚಾಲಕ ಮಾರುತಿ ಕಾರನ್ನು ಟ್ರಕ್​ನ ಹಿಂಭಾಗ ನಿಲ್ಲಿಸಿದ್ದ. ರೆಡ್​ ಸಿಗ್ನಲ್​ ಇರುವಾಗಲೇ ಹಿಂದಿನಿಂದ ಬಂದ ಮತ್ತೊಂದು ಟ್ರಕ್​ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಯುವತಿ ಮೃತಪಟ್ಟಿದ್ದು, ಚಾಲಕ ಗಂಭೀರ ಗಾಯಗೊಂಡಿದ್ದಾನೆ.

ಅಪಘಾತಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಟ್ರಕ್​ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ. ಎರಡು ಟ್ರಕ್​ಗಳ ನಡುವೆ ಕಾರು ಸಿಲುಕಿದೆ.

ಕಾರು ಚಾಲಕನನ್ನು ಹರ್ಮಿಂದರ್ ಸಿಂಗ್ ಎಂದು ಗುರುತಿಸಲಾಗಿದೆ. ತನ್ನ ಚಿಕ್ಕಮ್ಮ ಮತ್ತು ಅವರ ಸೋದರಸಂಬಂಧಿಗಳೊಂದಿಗೆ ಗುರುದ್ವಾರ ಸಿಸ್ ಗಂಜ್ ಸಾಹಿಬ್‌ ಸಿಖ್​ ದೇವಸ್ಥಾನದಿಂದ ತಿಮಾರ್‌ಪುರದ ನೆಹರು ವಿಹಾರ್‌ಗೆ ಪ್ರಯಾಣಿಸುತ್ತಿದ್ದರು. ಅವರ ಚಿಕ್ಕಮ್ಮ ಪುಷ್ಪಾ ಮತ್ತು ಅವರ ಮಗಳು ಅಮನದೀಪ್ ಕೌರ್ ಹಿಂದಿನ ಸೀಟಿನಲ್ಲಿ ಕುಳಿತಿದ್ದರೆ, ಇನ್ನೊಬ್ಬ ಸೋದರಸಂಬಂಧಿ ಬಂಟಿ ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದರು.

ಅಪಘಾತದಲ್ಲಿ ಅಮನ್‌ದೀಪ್ ಕೌರ್ ಮತ್ತು ಬಂಟಿ ಇಬ್ಬರೂ ಗಾಯಗೊಂಡಿದ್ದು, ಅವರನ್ನು ಸಮೀಪದ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಯಿತು. ಆದರೆ, ಅಮನ್​ದೀಪ್​ ಕೌರ್​ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರಕ್​ ಚಾಲಕ ಸ್ಥಳದಿಂದ ಎಸ್ಕೇಪ್​ ಆಗಿದ್ದಾನೆ. ಆತನ ವಿರುದ್ಧ ದೆಹಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 (ಅತಿವೇಗದ ಚಾಲನೆ), 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು) ಮತ್ತು 304ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಚಾಲಕನನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net