

Delhi University : ದೆಹಲಿ ವಿಶ್ವವಿದ್ಯಾಲಯದ ಲಕ್ಷ್ಮಿಬಾಯಿ ಕಾಲೇಜಿನ ಪ್ರಾಂಶುಪಾಲರು ತರಗತಿಯ ಗೋಡೆಗಳಿಗೆ ಹಸುವಿನ ಸಗಣಿ ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರಣಿ ವಿಡಿಯೋಗಳಲ್ಲಿ ಸೆರೆಹಿಡಿಯಲಾದ ದೃಶ್ಯವನ್ನು ಸ್ವತಃ ಪ್ರಾಂಶುಪಾಲರೇ ಕಾಲೇಜಿನ ಅಧ್ಯಾಪಕರಿಗಾಗಿ ರಚಿಸಿದ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಹಂಚಿಕೊಂಡಿದ್ದಾರೆ.
ಗ್ರೂಪ್ನಲ್ಲಿ ಹರಿದಾಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳಲ್ಲಿ, ಪ್ರಾಂಶುಪಾಲೆ ಪ್ರತ್ಯುಷ್ ವತ್ಸಲಾ ಅವರು ಸಿ ಬ್ಲಾಕ್ನಲ್ಲಿರುವ ಕೋಣೆಯ ಗೋಡೆಗಳಿಗೆ ಹಸುವಿನ ಸಗಣಿ ಹಚ್ಚುತ್ತಾ ಕುರ್ಚಿಯ ಮೇಲೆ ನಿಂತಿರುವುದು ಕಂಡುಬರುತ್ತದೆ. ಇದೇ ಸಂದರ್ಭದಲ್ಲಿ ಕಾಲೇಜು ಸಿಬ್ಬಂದಿ ಅವರಿಗೆ ಸಹಾಯ ಮಾಡುತ್ತಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದು.
ಈ ಬಗ್ಗೆ ಗ್ರೂಪ್ನಲ್ಲಿ ಬರೆದುಕೊಂಡಿರುವ ಪ್ರಾಂಶುಪಾಲರು, ಸಿ ಬ್ಲಾಕ್ನಲ್ಲಿ ಶಾಖದ ಬಗ್ಗೆ ಕೇಳಿಬಂದ ದೂರುಗಳನ್ನು ಪರಿಹರಿಸಲು ದೇಸಿ ವಿಧಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇಲ್ಲಿ ತರಗತಿಗಳನ್ನು ನಡೆಸುತ್ತಿರುವವರಿಗೆ ಶೀಘ್ರದಲ್ಲೇ ಅಲ್ಲಿನ ಕೊಠಡಿಗಳು ಹೊಸ ರೂಪದಲ್ಲಿ ಸಿಗುತ್ತವೆ. ನಿಮ್ಮ ಬೋಧನಾ ಅನುಭವವನ್ನು ಹೆಚ್ಚು ಆರಾಮದಾಯಕವಾಗಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಈ ಕುರಿತು ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತನಾಡಿರುವ ವತ್ಸಲಾ, ಇದು ಸಾಂಪ್ರದಾಯಿಕ ಭಾರತೀಯ ಜ್ಞಾನವನ್ನು ಬಳಸಿಕೊಂಡು ಶಾಖ ನಿಯಂತ್ರಣದ ಅಧ್ಯಯನ ಎಂಬ ಅಧ್ಯಾಪಕರ ಸಂಶೋಧನಾ ಪ್ರಸ್ತಾವನೆಯ ಭಾಗವಾಗಿದೆ ಎಂದರು. ಆದರೆ, ಈ ಬಗ್ಗೆ ಹೆಚ್ಚಿನ ವಿವರಣೆಯನ್ನು ಅವರು ನೀಡಲಿಲ್ಲ.
ಹಸುವಿನ ಸಗಣಿ ನೈಸರ್ಗಿಕ ತಂಪಾಗಿಸುವ ಗುಣಗಳನ್ನು ಹೊಂದಿದೆ. ಹೀಗಾಗಿ ಗ್ರಾಮೀಣ ಭಾರತದ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ಬಳಸಲಾಗುತ್ತಿದೆ. ಆದರೆ, ನಗರ ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಬಳಸುತ್ತಿರುವುದು ವಿದ್ಯಾರ್ಥಿಗಳಲ್ಲಿ ಒಂದು ರೀತಿಯ ಕುತೂಹಲವನ್ನು ಹೆಚ್ಚಿಸಿದೆ. ಈ ಬಗ್ಗೆ ಅಂತಿಮ ವರ್ಷದ ಪದವಿಪೂರ್ವ ವಿದ್ಯಾರ್ಥಿಯೊಬ್ಬರು ಇಂಡಿಯನ್ ಎಕ್ಸ್ಪ್ರೆಸ್ ಜತೆ ಮಾತನಾಡಿದ್ದು ತರಗತಿಯಲ್ಲಿ ಫ್ಯಾನ್ಗಳಂತಹ ಮೂಲಭೂತ ಸೌಲಭ್ಯಗಳಿದ್ದರೂ, ಬಿಸಿಲನ್ನು ತಣಿಸಲು ಪ್ರಾಂಶುಪಾಲರು ಸಾಮಾನ್ಯ ಪರಿಹಾರವನ್ನು ನೀಡಿದ್ದಾರೆ. ನಿಜಕ್ಕೂ ಇದು ಆಶ್ಚರ್ಯಕರವಾಗಿತ್ತು ಎಂದಿದ್ದಾರೆ.
ಕಾಲೇಜಿನ ವಿದ್ಯಾರ್ಥಿ ಸಂಘದ ಭಾಗವಾಗಿರುವ ಮತ್ತೊಬ್ಬ ವಿದ್ಯಾರ್ಥಿ ಮಾತನಾಡಿದ್ದು, ಕಳೆದ ಒಂದು ವಾರದಿಂದ ತಾಪಮಾನ ಏರಿಕೆ ಮತ್ತು ಫ್ಯಾನ್ಗಳ ಅಸಮರ್ಪಕ ಕಾರ್ಯದ ಬಗ್ಗೆ ಹಲವಾರು ದೂರುಗಳು ಬರುತ್ತಿವೆ. ಈ ನಿರ್ದಿಷ್ಟ ತರಗತಿ ಕೊಠಡಿ ಕ್ಯಾಂಟೀನ್ನ ಮೇಲ್ಭಾಗದಲ್ಲಿದೆ ಮತ್ತು ಹಳೆಯ ಕಟ್ಟಡಗಳಲ್ಲಿ ಇದು ಕೂಡ ಒಂದು ಭಾಗವಾಗಿದೆ. ಹಸುವಿನ ಸಗಣಿ ಹಾಕಿದ ನಂತರ ತರಗತಿ ಕೊಠಡಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನಮಗೆ ಖಚಿತವಿಲ್ಲ. ಮುಂದಿನ ವಾರ ನಾವು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಮಾತನಾಡಲು ಯೋಜಿಸಿದ್ದೇವೆ ಎಂದು ಹೇಳಿದರು.
ಆದರೆ, ಅಧ್ಯಾಪಕರ ಒಂದು ವಿಭಾಗವು ಈ ಕ್ರಮವನ್ನು ಟೀಕಿಸಿದೆ. ಕಾಲೇಜಿನ ಅಕಾಡೆಮಿಕ್ ಕೌನ್ಸಿಲ್ (ಎಸಿ) ಸದಸ್ಯೆ ಮತ್ತು ಅಸೋಸಿಯೇಟ್ ಪ್ರೊಫೆಸರ್ ಆಗಿರುವ ನೀಲಂ ಅವರು ಇಂಡಿಯನ್ ಎಕ್ಸ್ಪ್ರೆಸ್ ಜತೆ ಮಾತನಾಡಿದ್ದು, ಮೂಲಭೂತ ಮೂಲಸೌಕರ್ಯ ಸೌಲಭ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕೌನ್ಸಿಲ್ನಲ್ಲಿ ಅಂಗೀಕರಿಸದೆ ತರಗತಿ ಕೊಠಡಿಗಳಲ್ಲಿ ಬದಲಾವಣೆಗಳನ್ನು ಹೇಗೆ ಪ್ರಾರಂಭಿಸಬಹುದು? ಒಂದು ತರಗತಿ ಹಳೆಯದಾಗಿದೆ ಎಂದ ಮಾತ್ರಕ್ಕೆ ಅದರ ಮೂಲಸೌಕರ್ಯ ಮತ್ತು ನಿರ್ವಹಣೆಯನ್ನು ನಿರ್ಲಕ್ಷಿಸಬಹುದು ಎಂದರ್ಥವಲ್ಲ. ನಮ್ಮ ಕಾಲೇಜಿನಲ್ಲಿರುವ ಸೌಲಭ್ಯಗಳಿಗೆ ತುರ್ತು ಗಮನ ಬೇಕು. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಶೌಚಾಲಯಗಳು ಅಸ್ವಚ್ಛವಾಗಿವೆ. ತರಗತಿಯ ಕಿಟಕಿ ಗಾಜುಗಳು ಮುರಿದುಹೋಗಿವೆ ಮತ್ತು ಸೊಳ್ಳೆಗಳು ಬಹಳಷ್ಟು ಇವೆ. ಈ ಸಮಸ್ಯೆಗಳಿಗೆ ನಮಗೆ ಪ್ರಾಯೋಗಿಕ ಪರಿಹಾರಗಳು ಬೇಕಾಗಿವೆ. ಗೋಡೆಗಳ ಮೇಲೆ ಹಸುವಿನ ಸಗಣಿ ಹಚ್ಚುವುದರಿಂದ ಇದೆಲ್ಲ ಸರಿ ಹೋಗುವುದಿಲ್ಲ ಎಂದರು. (ಏಜೆನ್ಸೀಸ್)