

ನವದೆಹಲಿ: ದೆಹಲಿ ಹಾಗೂ ಗಾಜಿಯಾಬಾದ್ ನಡುವಿನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಜಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.
ದೆಹಲಿ ಹಾಗೂ ಗಾಜಿಯಾಬಾದ್ನ ಕೆಲವು ಸ್ಥಳಗಳನ್ನು ಹಾಟ್ಸ್ಪಾಟ್ ಎಂದು ಗುರುತಿಸಿ ಸೀಲ್ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಎರಡು ನಗರಗಳ ನಡುವಿನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಎರಡು ನಗರಗಳ ನಡುವೆ ಸಂಚಾರವನ್ನು ಸರ್ಕಾರ ನಿಷೇಧಿಸಿದ್ದರೂ ಸಾರ್ವಜನಿಕರು ಬೈಕ್ ಹಾಗೂ ಇತರ ವಾಹನಗಳಲ್ಲಿ ಸಂಚರಿಸುತ್ತಿದ್ದರು. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘಿಸಿ ಸಂಚರಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಜಯ್ ಶಂಕರ್ ಪಾಂಡೆ ತಿಳಿಸಿದ್ದಾರೆ.
ಎರಡು ನಗರಗಳಲ್ಲಿ ಮೇ.3ರವರೆಗೆ ಲಾಕ್ಡೌನ್ ನಿಯಮ ಮುಂದುವರೆಯಲಿದೆ. ಸೀಲ್ಡೌನ್ ಮಾಡಿರುವ ಪ್ರದೇಶಗಳಲ್ಲೂ ಕೂಡ ನಿಯಮ ಜಾರಿಯಲ್ಲಿರುತ್ತವೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)