

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 54 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ರಾತ್ರಿ ಬಿಡುಗಡೆ ಮಾಡಿದೆ.
ರಾಷ್ಟ್ರ ರಾಜಧಾನಿಯು ಒಟ್ಟು 70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಮೊದಲ ಭಾಗವಾಗಿ ಕಾಂಗ್ರೆಸ್ 54 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದೆ. ಆಮ್ ಆದ್ಮಿ ಪಕ್ಷದಿಂದ ಟಿಕೆಟ್ ದೊರೆಯದೇ ಕಾಂಗ್ರೆಸ್ ಸೇರಿರುವ ದ್ವಾರಕ ಕ್ಷೇತ್ರದ ಶಾಸಕ ಆದರ್ಶ್ ಶಾಸ್ತ್ರಿಯನ್ನು ಕಾಂಗ್ರೆಸ್ ಚುನಾವಣಾ ಕಣಕ್ಕಿಳಿಸಿದೆ. ದ್ವಾರಕ ಕ್ಷೇತ್ರದಲ್ಲಿ ಶಾಸ್ತ್ರಿಗೆ ಪ್ರತಿಸ್ಪರ್ಧಿಯಾಗಿ ಆಪ್ನ ವಿನಯ್ ಮಿಶ್ರ ಸ್ಪರ್ಧಿಸಿದ್ದಾರೆ.
ಆಪ್ ಮಾಜಿ ನಾಯಕ ಅಲ್ಕ ಲಂಬಾರಿಗೂ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಚಾಂದನಿ ಚೌಕ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಇದನ್ನು ಹೊರತುಪಡಿಸಿ, ಅರವಿಂದರ್ ಸಿಂಗ್ ಲವ್ಲಿ ಗಾಂಧಿನಗರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಆದರ್ಶ್ ಶಾಸ್ತ್ರಿ ಅವರು ದೆಹಲಿಯ ಕಾಂಗ್ರೆಸ್ ಘಟಕದಲ್ಲಿ ರಾಜ್ಯಾಧ್ಯಕ್ಷ ಸುಭಾಷ್ ಚೋಪ್ರಾ ಹಾಗೂ ಎಐಸಿಸಿ ಉಸ್ತುವಾರಿ ಪಿ.ಸಿ. ಛಕೂ ಸಮ್ಮುಖದಲ್ಲಿ ಶನಿವಾರ ಕಾಂಗ್ರೆಸ್ ಸೇರ್ಪಡೆಯಾಗಿದರು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗನಾಗಿರುವ ಆದರ್ಶ್ ಶಾಸ್ತ್ರಿ ಆಮ್ ಆದ್ಮಿ ಪಕ್ಷದಲ್ಲಿ ರಾಷ್ಟ್ರೀಯ ವಕ್ತಾರ ಮತ್ತು ಸಾಗರೋತ್ತರ ವ್ಯವಹಾರಗಳ ಸಹ-ಸಂಚಾಲಕರಾಗಿದ್ದರು.
ಫೆ.8 ರಂದು ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ನಡೆಯಲಿದ್ದು, 11ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್)