ಸಂಸತ್ ಭದ್ರತಾ ಉಲ್ಲಂಘನೆ: ಘಟನೆ ಹಿಂದಿನ ಮಾಸ್ಟರ್ ಮೈಂಡ್ ಯಾರು? ಇಲ್ಲಿದೆ ವರದಿ

ವಿಜಯವಾಣಿ (73)
Published on

ಹೊಸದಿಲ್ಲಿ: ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶದ ಆರೋಪದ ಮೇಲೆ ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ಆರನೇ ಆರೋಪಿ ಮಹೇಶ್ ಕುಮಾವತ್​ನನ್ನು ಇದೀಗ ದೆಹಲಿ ಪೊಲೀಸ್ ವಿಶೇಷ ದಳ ಬಂಧಿಸಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ.

ಆರೋಪಿ ಮಹೇಶ್​ನನ್ನು ಬಂಧಿಸಿದ ಬಳಿಕ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರುಪಡಿಸಲಾಗುವುದು ಮತ್ತು ವಿಚಾರಣೆಗಾಗಿ ಪೊಲೀಸರು ಆತನನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಗುರುವಾರ, ಲಲಿತ್ ಝಾ ಮತ್ತು ಮಹೇಶ್ ಕರ್ತವ್ಯ ಪಥ್ ಪೊಲೀಸ್ ಠಾಣೆಗೆ ಬಂದು ಶರಣಾದ ಬೆನ್ನಲ್ಲೇ, ಇಬ್ಬರನ್ನೂ ತನಿಖೆಯ ಸಲುವಾಗಿ ವಿಶೇಷ ಸೆಲ್‌ಗೆ ಕರೆದೊಯ್ಯಲಾಯಿತು.

ಈ ನಡುವೆ ಲಲಿತ್​ನನ್ನು ಬಂಧಿಸಿದ ಪೊಲೀಸರು, ಮಹೇಶ್​ನನ್ನು ವಿಚಾರಣೆಗೆ ಒಳಪಡಿಸಿದರು. ವಿಚಾರಣೆಯ ಸಮಯದಲ್ಲಿ ಕೈಲಾಶ್‌ನ ಕೈವಾಡ ಹೊರಬಿದ್ದಿದೆ. ಇದು ಆತನ ಬಂಧನಕ್ಕೆ ಕಾರಣವಾಗಿದೆ. ಇಡೀ ಪಿತೂರಿ ಹಿಂದಿನ ಮಾಸ್ಟರ್ ಮೈಂಡ್ ಎಂದು ಗುರುತಿಸಲಾದ ಲಲಿತ್​ ಸಂಸತ್ತಿನ ಹೊರಗೆ ಹಾಜರಾಗಿದ್ದ ಎಂದು ವರದಿಯಾಗಿದೆ. ಸದ್ಯ ಈ ಇಬ್ಬರನ್ನು ಅರೆಸ್ಟ್​ ಮಾಡಿರುವ ಪೊಲೀಸರು, ಇದೀಗ ವಿಚಾರಣೆ ನಡೆಸುತ್ತಿದ್ದಾರೆ.

ಮಹೇಶ್ 'ಭಗತ್ ಸಿಂಗ್ ಫ್ಯಾನ್ ಪೇಜ್' ಹೆಸರಿನ ಫೇಸ್‌ಬುಕ್ ಗ್ರೂಪ್ ಮೂಲಕ ಲಲಿತ್ ಮತ್ತು ಇತರರೊಂದಿಗೆ ಸಂಭಾಷಣೆ ನಡೆಸಿದ್ದಾನೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net