"ದಿಲ್ಲಿ ಅಬ್ ದೂರ್​ ನಹಿ, ಆಪ್​ಕೆ ದರವಾಜೆ ಪರ್​ ಹೆ" : ಪ್ರಧಾನಿ ಮೋದಿ

modi
Published on

ಧೇಮಾಜಿ: ಭಾರತವನ್ನು ದಶಕಗಳವರೆಗೆ ಆಳಿದ ಹಿಂದಿನ ಸರ್ಕಾರಗಳು ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳನ್ನು ನಿರ್ಲಕ್ಷಿಸುತ್ತಾ ಬಂದಿವೆ. ಆದರೆ ತಮ್ಮ ಸರ್ಕಾರ ಈ ಪ್ರದೇಶದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಅಸ್ಸಾಂಗೆ ಭೇಟಿ ನೀಡಿರುವ ಮೋದಿ, ಈಗ ದೆಹಲಿ ಅಸ್ಸಾಂ ಜನರಿಗೆ ಹತ್ತಿರವಾಗಿದೆ ಎಂದರು.

ಅಸ್ಸಾಂನಲ್ಲಿ ಆರಂಭವಾಗುತ್ತಿರುವ 3,300 ಕೋಟಿ ರೂಪಾಯಿ ಮೌಲ್ಯದ ಮೂರು ಪೆಟ್ರೋಲಿಯಂ ಕ್ಷೇತ್ರದ ಬೃಹತ್​ ಯೋಜನೆಗಳನ್ನು ಸೋಮವಾರ ಮೋದಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಧೇಮಾಜಿ ನಗರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ನೇತೃತ್ವದ ರಾಜ್ಯ ಸರ್ಕಾರ ಕಳೆದ ಕೆಲವು ವರ್ಷಗಳಲ್ಲಿ ಕೈಗೊಂಡ ಯೋಜನೆಗಳನ್ನು ವಿವರಿಸಿದ ಮೋದಿ, ರಾಜ್ಯದ ಸಮತೋಲನವಾದ ಬೆಳವಣಿಗೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದೆ ಎಂದರು.

ಸ್ವಾತಂತ್ರ್ಯ ಸಿಕ್ಕಾಗಿನಿಂದ ದಶಕಗಳವರೆಗೆ ಆಳ್ವಿಕೆ ನಡೆಸಿದವರು ದಿಸ್ಪುರ್​ (ಅಸ್ಸಾಂ ರಾಜಧಾನಿ) ದಿಲ್ಲಿಯಿಂದ ತುಂಬಾ ದೂರ ಇದೆ ಅಂತ ನಂಬಿದ್ದರು ಎಂದು ಟೀಕಿಸಿದ ಮೋದಿ, "ದಿಲ್ಲಿ ಅಬ್ ದೂರ್​ ನಹಿ, ಆಪ್​ಕೆ ದರವಾಜೆ ಪರ್​ ಹೆ" (ದೆಹಲಿ ಈಗ ದೂರ ಇಲ್ಲ, ನಿಮ್ಮ ಬಾಗಿಲಲ್ಲೇ ಇದೆ) ಎಂದು ನೆರೆದಿದ್ದ ಭಾರೀ ಜನಸಮೂಹಕ್ಕೆ ಹೇಳಿದರು. ಹಿಂದಿನ ಸರ್ಕಾರಗಳು ಅಸ್ಸಾಂ ಬಗ್ಗೆ ಮಲತಾಯಿಧೋರಣೆ ವಹಿಸಿದ್ದು, ಸಂಪರ್ಕ, ಆರೋಗ್ಯ, ಶಿಕ್ಷಣ ಮತ್ತು ಉದ್ಯಮ ಎಲ್ಲವನ್ನೂ ನಿರ್ಲಕ್ಷಿಸಿದ್ದವು ಎಂದು ಮೋದಿ ಹೇಳಿದರು.(ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net