

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಹೇಳಿಕೆ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ದೆಹಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಜಫರುಲ್ ಇಸ್ಲಾಮ್ ಖಾನ್ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗಿದೆ. ವಸಂತಕುಂಜ್ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸ್ನ ವಿಶೇಷ ಘಟಕದ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ.
ಭಾರತದಲ್ಲಿ ಈ ರೀತಿಯಾಗಿ ಮುಸ್ಲಿಮರನ್ನು ಹತ್ತಿಕ್ಕುವ ಪ್ರಯತ್ನಗಳು ಮುಂದುವರಿದರೆ ಅರಬ್ ರಾಷ್ಟ್ರಗಳಿಗೆ ದೂರು ಕೊಡಬೇಕಾಗುತ್ತದೆ. ಆಗ ಭಾರತದ ಮೇಲೆ ಅವರೆಲ್ಲರೂ ಮುರಿದುಕೊಂಡು ಬೀಳುವುದರಿಂದ ದೇಶದಲ್ಲಿ ಅಲ್ಲೋಲಕಲ್ಲೋಲ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಜಫರುಲ್ ಇಸ್ಲಾಂ ಖಾನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಏಪ್ರಿಲ್ 28ರಂದು ಅವರು ಮಾಡಿದ್ದ ಪೋಸ್ಟ್ ಅನ್ನು ಗಮನಿಸಿದ್ದ ದೆಹಲಿ ನಿವಾಸಿಯೊಬ್ಬರು ದೆಹಲಿ ಪೊಲೀಸ್ನ ವಿಶೇಷ ಘಟಕಕ್ಕೆ ದೂರು ಸಲ್ಲಿಸಿದ್ದರು. ಇದನ್ನು ಆಧರಿಸಿ ದೆಹಲಿ ಪೊಲೀಸ್ನ ವಿಶೇಷ ಘಟಕದ ಅಧಿಕಾರಿಗಳು ಜಫರುಲ್ ಇಸ್ಲಾಂ ಖಾನ್ ವಿರುದ್ಧ ಭಾರತೀಯ ದಂಡಸಂಹಿತೆಯ 124 ಎ (ದೇಶದ್ರೋಹ) ಮತ್ತು 153ಎ (ಜಾತಿ, ಮತ, ಧರ್ಮ, ಹುಟ್ಟಿದ ಸ್ಥಳ ಮತ್ತಿತರೆ ಆಧಾರದಲ್ಲಿ ಎರಡು ಗುಂಪುಗಳ ನಡುವೆ ದ್ವೇಷ ಮೂಡಿಸುವುದು ಹಾಗೂ ಸೌಹಾರ್ದ ವಾತಾವರಣ ಕದಡುವ ಪ್ರಯತ್ನ) ವಿಧಿಗಳ ಪ್ರಕಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿರುವಂತೆ ಎಚ್ಚೆತ್ತುಕೊಂಡಿದ್ದ ಜಫರುಲ್ ಇಸ್ಲಾಂ ಖಾನ್ ಮೇ 1ರಂದು ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ಮೂಲಕ ಕ್ಷಮೆಯಾಚಿಸಿದ್ದರು. ದೇಶವು ಕರೊನಾ ಪಿಡುಗಿನ ವಿರುದ್ಧ ಹೋರಾಡುತ್ತಿರುವಂಥ ತುರ್ತು ಸಂದರ್ಭದಲ್ಲಿ ಈ ರೀತಿಯ ಪೋಸ್ಟ್ ಮಾಡಿದ್ದು ತಪ್ಪಾಗಿದೆ ಎಂದು ಹೇಳಿದ್ದರು.