

ನವದೆಹಲಿ: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಹೃದಯ ಶಸ್ತ್ರಚಿಕಿತ್ಸೆಯ ಬಳಿಕ ದೇಹ ಸ್ಥಿತಿ ವಿಷಮಿಸಿರಬಹುದು ಅಥವಾ ಮೃತಪಟ್ಟಿರಬಹುದು ಎಂದು ಭಾವಿಸಲಾಗಿದ್ದ ಕಿಮ್ ಜಾಂಗ್ ಉನ್, ಶನಿವಾರ ಬಿಡುಗಡೆಯಾಗಿರುವ ಫೋಟೋಗಳಲ್ಲಿ ಆರೋಗ್ಯವಾಗಿಯೇ ಕಾಣಿಸುತ್ತಿದ್ದಾರೆ.
ರಾಜಧಾನಿ ಪ್ಯಾಂಗ್ಯಾಂಗ್ನ ಈಶಾನ್ಯ ಭಾಗದಲ್ಲಿರುವ ರಸಗೊಬ್ಬರ ಕಾರ್ಖಾನೆಯೊಂದಕ್ಕೆ ಭೇಟಿಯಾಗಿ, ಅಲ್ಲಿ ಕೆಲವು ವಿಭಾಗಗಳನ್ನು ಕಿಮ್ ಜಾಂಗ್ ಉನ್ ಉದ್ಘಾಟಿಸಿದರು ಎನ್ನಲಾಗಿದೆ. ಜತೆಗೆ ಸಾರ್ವಜನಿಕ ಸಭೆಯೊಂದರಲ್ಲೂ ಅವರು ಪಾಲ್ಗೊಂಡಿದ್ದಾರೆ.
2011ರಲ್ಲಿ ಉತ್ತರ ಕೊರಿಯಾದ ಆಡಳಿತ ಚುಕ್ಕಾಣಿ ಹಿಡಿದ ನಂತರದಲ್ಲಿ ಕಿಮ್ ಜಾಂಗ್ ಉನ್ ವಿಪರೀತ ದಪ್ಪವಾಗಿದ್ದಾರೆ. ಇವರು ಮಾವೋ ಸೂಟ್ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಚಿತ್ರಗಳಿಂದ ಸ್ಪಷ್ಟವಾಗುತ್ತದೆ. ಒಂದೆರಡು ದಿನಗಳ ಹಿಂದಷ್ಟೇ ಕ್ಷೌರ ಮಾಡಿಸಿಕೊಂಡಂತೆಯೂ ಕಾಣುತ್ತದೆ.
ಕಿಮ್ ನಿಧನಾ ನಂತರದಲ್ಲಿ ಉತ್ತರ ಕೊರಿಯಾದ ಆಡಳಿತ ವಹಿಸಿಕೊಳ್ಳುತ್ತಾರೆ ಎಂದೇ ಹೇಳಲಾಗುತ್ತಿರುವ ಕಿಮ್ ಅವರ ಸಹೋದರಿ ಕಿಮ್ ಯೋ ಜಾಂಗ್ ಮತ್ತೊಂದು ಫೋಟೋದಲ್ಲಿ ಹೊಸ ಬಗೆಯ ಹೇರ್ಸ್ಟೈಲ್ನೊಂದಿಗೆ ಕಿಮ್ ಜಾಂಗ್ ಉನ್ ಪಕ್ಕದಲ್ಲೇ ನಿಂತಿದ್ದಾರೆ. ಈ ಚಿತ್ರದಲ್ಲಿ ವ್ಯಕ್ತಿಯೊಬ್ಬ ಬಿಳಿಯ ಕೋಲನ್ನು ಹಿಡಿದುಕೊಂಡಿದ್ದು, ಬಹುಶಃ ಪವರ್ಪಾಯಿಂಟ್ ಪ್ರಸೆಂಟೇಷನ್ ಸಂದರ್ಭದಲ್ಲಿ ವಿವರಣೆ ನೀಡಲು ಬಳಸುವ ಕೋಲು ಅದಾಗಿರಬಹುದು ಎನ್ನಲಾಗುತ್ತಿದೆ.
ಮತ್ತೊಂದು ಫೋಟೋದಲ್ಲಿ ಕಿಮ್ ಜಾಂಗ್ ಉನ್ ಜತೆಯಲ್ಲಿರುವ ವ್ಯಕ್ತಿಯೊಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವುದು ಕಾಣಿಸುತ್ತದೆ. ಇದರಿಂದ ಉತ್ತರ ಕೊರಿಯಾದಲ್ಲಿ ಕೂಡ ಕೋವಿಡ್ 19 ಸೋಂಕಿನ ಬಗ್ಗೆ ಭೀತಿ ಇದೆ ಎಂಬುದು ಸ್ಪಷ್ಟವಾಗುತ್ತದೆ.
ಆದರೂ ನಂಬಲಾಗದು: ತನ್ನ ನಾಯಕರ ಬಗ್ಗೆ ಅಥವಾ ರಾಷ್ಟ್ರದ ಬಗ್ಗೆ ಅನುಮಾನಗಳು ವ್ಯಕ್ತವಾದಗಲೆಲ್ಲ ಉತ್ತರ ಕೊರಿಯಾದ ಅಧಿಕಾರಿಗಳು ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿ ಫೋಟೋಗಳನ್ನು ತಿದ್ದಿ ಪ್ರಕಟಿಸುವ ರೂಢಿ ಹೊಂದಿದ್ದಾರೆ. ಸದ್ಯ ಕಿಮ್ ಜಾಂಗ್ ಉನ್ನ ಆರೋಗ್ಯ ಸ್ಥಿತಿ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿರುವ ಕಾರಣ, ಅದನ್ನು ಮರೆಮಾಚುವ ಸಲುವಾಗಿ ಕಿಮ್ ಜಾಂಗ್ ಉನ್ ಕುರಿತ ತಿದ್ದಿದ ಫೋಟೋಗಳನ್ನು ಬಿಡುಗಡೆ ಮಾಡಿರುವ ಸಾಧ್ಯತೆ ಇರುವುದಾಗಿಯೂ ಹೇಳಲಾಗುತ್ತಿದೆ.