ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ, ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆ

Manish Sisodia
Published on

ನವದೆಹಲಿ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ರಾಜ್ಯ ಸಂಪುಟದಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಇಬ್ಬರ ರಾಜೀನಾಮೆಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಂಗೀಕರಿಸಿದ್ದಾರೆ.

ತನ್ನ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಬೆನ್ನಲ್ಲೇ ಮನೀಶ್ ಸಿಸೋಡಿಯಾ ರಾಜೀನಾಮೆ ನೀಡಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ಕಳೆದ ಭಾನುವಾರ ಬಂಧಿತರಾಗಿರುವ ಮನೀಶ್ ಸಿಸೋಡಿಯಾ ಅವರನ್ನು ಸ್ಥಳೀಯ ನ್ಯಾಯಾಲಯ ಮಾರ್ಚ್ 4 ರವರೆಗೆ ಸಿಬಿಐ ವಶಕ್ಕೆ ಒಪ್ಪಿಸಿದೆ. ದೇಹಲಿಯ ರೋಸ್ ಅವೆನ್ಯೂ ಕೋರ್ಟ್​ನ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗಪಾಲ್, ಸಿಬಿಐ ಸಲ್ಲಿಸಿದ್ದ ಮನವಿಗೆ ಸಮ್ಮತಿಸಿ ಐದು ದಿನ ಕಸ್ಟಡಿಗೆ ಒಪ್ಪಿಸಲು ಆದೇಶಿಸಿದ್ದರು. ಸಿಸೋಡಿಯಾಗೆ ಜಾಮೀನು ನೀಡಬೇಕು ಎಂದು ಅವರ ವಕೀಲರು ಕೋರಿದ್ದರು.

ಸಿಬಿಐನ ಹೆಚ್ಚಿನ ಅಧಿಕಾರಿಗಳು ಸಿಸೋಡಿಯಾ ಬಂಧನವನ್ನು ವಿರೋಧಿಸಿದ್ದಾರೆ. ಸಿಸೋಡಿಯಾ ವಿರುದ್ಧ ಯಾವುದೇ ಪುರಾವೆಗಳಿಲ್ಲದಿದ್ದರೂ ಅವರನ್ನು ಬಂಧಿಸಲು ರಾಜಕೀಯ ಒತ್ತಡ ಹೆಚ್ಚಿದ್ದು, ಅಧಿಕಾರಿಗಳು ಅದನ್ನು ಪಾಲಿಸಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net