

ನವದೆಹಲಿ: ಲಾಕ್‌ಡೌನ್ ಉಲ್ಲಂಘಿಸಿ ಯಾರೂ ಮನೆಯಿಂದ ಹೊರಕ್ಕೆ ಹೋಗುವಂತಿಲ್ಲ ಎಂಬ ನಿಯಮ ಕಡ್ಡಾಯ ಮಾಡಿದ್ದರೂ ಅದನ್ನು ಉಲ್ಲಂಘಿಸಿ ಕೆಲ ಜನರು ತಿರುಗಾಡುವುದಂತೂ ನಿಲ್ಲಲಿಲ್ಲ. ಆದರೆ ವಿಶೇಷ ಕರ್ತವ್ಯದಲ್ಲಿ ಇರುವ ಅಧಿಕಾರಿಗಳಿಗೆ ಓಡಾಡಲು ಅನುಮತಿ ಇದೆ. ಆದರೂ ಇಲ್ಲೊಂದು ಪ್ರಕರಣದಲ್ಲಿ ಐಎಎಸ್ ಅಧಿಕಾರಿಯೆಂದು ಹೇಳಿ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಿದರೂ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯ ಈಶಾನ್ಯ ಪ್ರದೇಶದಲ್ಲಿ ನಿನ್ನೆ ಸಂಜೆ ನಡೆದಿದೆ!
29 ವರ್ಷದ ಅದಿತ್ಯ ಗುಪ್ತಾ ಎಂಬ ಯುವಕ ಕಾರಿನಲ್ಲಿ ಹೋಗುತ್ತಿದ್ದ. ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಎರಡೂ ಕಡೆಗಳಲ್ಲಿ ‘ಗವರ್ನಮೆಂಟ್ ಆಫ್ ಇಂಡಿಯಾ’ ಎಂಬುದಾಗಿ ನಮೂದಿಸಲಾಗಿತ್ತು. ಗೃಹ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿ ಎಂದು ಸಾರುವ ಕೆಲವೊಂದು ದಾಖಲೆಗಳೂ ಆತನ ಬಳಿ ಇದ್ದವು. ಇಷ್ಟೆಲ್ಲಾ ದಾಖಲೆಗಳೊಂದಿಗೆ ಆ ಯುವಕ ಕಾರಿನಲ್ಲಿ ಹೋಗುವಾಗ ದಿಢೀರ್ ಎಂದು ಪೊಲೀಸರು ಕಾರನ್ನು ತಡೆದಿದ್ದಾರೆ.
ಕಾರಿನಿಂದ ಇಳಿದ ಯುವಕ, ತನ್ನನ್ನು ಏಕೆ ತಡೆದದ್ದು ಎಂದು ಅಧಿಕಾರಿಗಳ ಗಾಂಭೀರ್ಯದಿಂದ ಪ್ರಶ್ನಿಸಿದ್ದಾನೆ. ‘ನಾನೊಬ್ಬ ಐಎಎಸ್ ಅಧಿಕಾರಿ. ಗೃಹ ವ್ಯವಹಾರಗಳ ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳಿದರೂ ಪೊಲೀಸರು ಆತನಿಗೆ ಅನೇಕ ಪ್ರಶ್ನೆ ಕೇಳಿದ್ದಾರೆ. ಸಿಟ್ಟಿನಿಂದ ಯುವಕ ತನ್ನ ಬಳಿ ಇರುವ ದಾಖಲೆಗಳನ್ನು ಮಾತ್ರವಲ್ಲದೇ ಕಾರಿನ ಎರಡೂ ಬದಿಗಳಲ್ಲಿ ಇರುವ ಸ್ಟಿಕರ್‌ಗಳನ್ನು ತೋರಿಸಿದ್ದಾನೆ. ಆದರೂ ಹೇಳಿಕೇಳಿ ಅವರು ಪೊಲೀಸರು. ಒಮ್ಮೆ ಸಂದೇಹ ತಲೆಯೊಳಕ್ಕೆ ಹೊಕ್ಕರೆ ಮುಗಿಯಿತು.
ಯುವಕ ನೀಡಿದ ಉತ್ತರ, ಅವನ ಹಾವಭಾವ ಎಲ್ಲವನ್ನೂ ಗಮನಿಸಿದ ಪೊಲೀಸರಿಗೆ ಅವನ ಮೇಲೆ ಇನ್ನಷ್ಟು ಸಂದೇಹ ಬಲವಾಗಿದೆ. ಅವರದೇ ಧಾಟಿಯಲ್ಲಿ ಪ್ರಶ್ನಿಸಿದಾಗ, ಬೆದರಿದ ಯುವಕ, ತನ್ನ ಅಸಲಿ ಬಣ್ಣ ಬಿಚ್ಚಿಟ್ಟಿದ್ದಾನೆ. ಲಾಕ್‌ಡೌನ್‌ನಲ್ಲಿ ಓಡಾಡುವ ಸಲುವಾಗಿ ಇಷ್ಟೆಲ್ಲಾ ಸರ್ಕಸ್ ಮಾಡಿದೆ, ನಾನು ಯಾವ ಅಧಿಕಾರಿಯೂ ಅಲ್ಲ ಎಂದಿದ್ದಾನೆ.
ಮುಂದೆ ಹೇಳಬೇಕಿಲ್ಲ ಅಲ್ಲವೆ? ಲಾಕ್‌ಡೌನ್ ನಿಯಮ ಉಲ್ಲಂಘನೆ ಒಂದೇ ಆಗಿದ್ದರೆ ಪರವಾಗಿಲ್ಲ, ನಕಲಿ ದಾಖಲೆ ಸೃಷ್ಟಿ, ಕಾರಿನ ಮೇಲೆ ಸರ್ಕಾರದ ಸ್ಟಿಕರ್, ಜತೆಗೆ ಪೊಲೀಸರೊಂದಿಗೆ ಜಗಳ ಒಂದೇ... ಎರಡೇ... ಸದ್ಯ ಆದಿತ್ಯ ಗುಪ್ತಾ ಈಗ ಪೊಲೀಸರ ಅತಿಥಿ!
(ಏಜನ್ಸೀಸ್)