ದೆಹಲಿ ಜಲ ಮಂಡಳಿ ಕಚೇರಿ ಮೇಲೆ ದಾಳಿ ನಡೆಸಿ ದರೋಡೆ ಮಾಡಿದ ಗೂಂಡಾಗಳು! ಬಿಜೆಪಿಯದ್ದೇ ಕೃತ್ಯ ಎಂದ ಎಎಪಿ

aap
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜಲ ಮಂಡಳಿ ಪ್ರಧಾನ ಕಚೇರಿಯ ಮೇಲೆ ಗುರುವಾರ ಗೂಂಡಾಗಳು ದಾಳಿ ನಡೆಸಿದ್ದು, ದರೋಡೆ ಮಾಡಿದ್ದಾರೆ. ಈ ಕೃತ್ಯವನ್ನು ಬಿಜೆಪಿಯ ಗೂಂಡಾಗಳೇ ನಡೆಸಿದ್ದಾರೆ ಎಂದು ಆಡಳಿತದಲ್ಲಿರುವ ಆಮ್​ ಆದ್ಮಿ ಪಕ್ಷದ ನಾಯಕರು ದೂರಿದ್ದಾರೆ.

ಎಎಪಿ ಶಾಸಕ ಮತ್ತು ಡಿಜೆಬಿ ಉಪಾಧ್ಯಕ್ಷ ರಾಘವ್ ಚಾಧಾ ದರೋಡೆಯಾಗಿರುವ ಕಚೇರಿಯ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಕಚೇರಿಯ ಕಿಟಕಿ, ಬಾಗಿಲನ್ನು ಮುರಿದು ಹಾಕಲಾಗಿದೆ. ಗಾಜನ್ನು ಒಡೆಯಲಾಗಿದೆ. ಕಚೇರಿಯನ್ನು ದರೋಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಗುರುವಾರ ಬೆಳಗ್ಗೆ ಸುಮಾರು 100 ಜನರ ಗುಂಪು ಕಚೇರಿಗೆ ನುಗ್ಗಿದ್ದು, ಗಾಜನ್ನೆಲ್ಲ ಪುಡಿ ಪುಡಿ ಮಾಡಿದೆ. ಕಿಟಕಿ, ಬಾಗಿಲು ಒಡೆದು, ಕಚೇರಿಯೊಳಗೆ ನುಗ್ಗಿದ್ದಾರೆ. ಪೊಲೀಸರು ತಡೆಯುವ ಪ್ರಯತ್ನ ಮಾಡಿದರೂ ಬಗ್ಗದ, ಗೂಂಡಾಗಳು ಪೊಲೀಸರನ್ನು ತಳ್ಳಿಕೊಂಡು ಒಳಗೆ ನುಗ್ಗಿದ್ದಾರೆ. ಇದು ಬಿಜೆಪಿಯ ಗೂಂಡಾಗಳದ್ದೇ ಕೆಲಸ. ದರೋಡೆಗೆ ಬಂದವರು, ಕೇಜ್ರಿವಾಲ್​ ಅವರು ಹೋರಾಟ ನಿರತ ರೈತರಿಗೆ ಬೆಂಬಲವನ್ನು ಮುಂದುವರಿಸಿದರೆ ಇನ್ನಷ್ಟು ಕಚೇರಿಗಳನ್ನು ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಎಪಿ ನಾಯಕರು ದೂರಿದ್ದಾರೆ.

ಈ ವಿಚಾರವಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರು ಟ್ವೀಟ್​ ಮಾಡಿದ್ದು, 'ನನ್ನ ಸರ್ಕಾರ ಮತ್ತು ನಾನು, ಕೊನೆಯುಸಿರಿರುವವರೆಗೂ ರೈತರಿಗೆ ಬೆಂಬಲ ನೀಡುತ್ತೇವೆ. ಇಂತಹ ಹೇಡಿತನದ ದಾಳಿಗೆ ನಾವು ಹೆದರುವುದಿಲ್ಲ.' ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net