ನಿಮ್ಮ ಕಾನೂನು ಪ್ರಕ್ರಿಯೆಗಳು ಏನೇ ಇದ್ದರೂ ಇನ್ನೊಂದು ವಾರದಲ್ಲಿ ಮುಗಿಸಬೇಕು'- ನಿರ್ಭಯಾ ಅತ್ಯಾಚಾರ ಅಪರಾಧಿಗಳಿಗೆ ಹೈಕೋರ್ಟ್ ಸೂಚನೆ, ಕೇಂದ್ರದ ಅರ್ಜಿ ವಜಾ

Nirbhaya 5 Feb 20
Published on

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಗಲ್ಲುಶಿಕ್ಷೆಯನ್ನು ತಡೆಹಿಡಿದ ದೆಹಲಿ ಪಟಿಯಾಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ದೆಹಲಿ ಹೈಕೋರ್ಟ್​ ಇಂದು ವಜಾಗೊಳಿಸಿದೆ.

ಈ ನಾಲ್ವರು ಅಪರಾಧಿಗಳನ್ನೂ ಒಟ್ಟಿಗೇ ಗಲ್ಲಿಗೇರಿಸಬೇಕು. ಬೇರೆಬೇರೆಯಾಗಿ ನೇಣಿಗೆ ಹಾಕುವಂತಿಲ್ಲ ಎಂದು ಸೂಚನೆ ನೀಡಿದ ಹೈಕೋರ್ಟ್ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟ್​ ಅವರು, ಅಪರಾಧಿಗಳು ಯಾವುದೇ ಕಾನೂನು ಪ್ರಕ್ರಿಯೆ ಕೈಗೊಳ್ಳುವುದಿದ್ದರೂ, ಅರ್ಜಿ ಸಲ್ಲಿಸುವುದಿದ್ದರೂ ಇನ್ನೊಂದು ವಾರದಲ್ಲಿ ಅದನ್ನೆಲ್ಲ ಪೂರ್ತಿಗೊಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳು ತಮಗೆ ವಿಧಿಸಲಾಗಿರುವ ಮರಣದಂಡನೆಯನ್ನು ವಿಳಂಬಗೊಳಿಸಿಕೊಳ್ಳಲು ಲೆಕ್ಕಾಚಾರ ಹಾಕಿದ್ದಾರೆ ಎಂದು ಕೇಂದ್ರ ಸರ್ಕಾರದ ಪರ ಸಾಲಿಸಿಟರ್​ ಜನರಲ್​ ತುಷಾರ್​ ಮೆಹ್ತಾ ಹೈಕೋರ್ಟ್​ನಲ್ಲಿ ಹೇಳಿದ್ದರು.

ಆದರೆ ಹೈಕೋರ್ಟ್​, ಅಪರಾಧಿಗಳು ಮರಣದಂಡನೆ ವಿಳಂಬದ ತಂತ್ರ ಅನುಸರಿಸಿದ್ದಾರೆ ಎಂದು ವಾದಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ. ನಾಲ್ವರು ಅಪರಾಧಿಗಳಿಗೆ ಸುಪ್ರೀಂಕೋರ್ಟ್​ 2017ರಲ್ಲಿಯೇ ಮರಣದಂಡನೆ ವಿಧಿಸಿದೆ. ಆದರೆ ಅದಾದ ಬಳಿಕ ಅವರಿಗೆ ಡೆತ್​ ವಾರಂಟ್​ ಜಾರಿ ಮಾಡುವಲ್ಲಿ ಯಾರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದೆ.

ಅಪರಾಧಿಗಳಾದ ಮುಕೇಶ್ ಕುಮಾರ್​ ಸಿಂಗ್​, ಪವನ್​ ಗುಪ್ತಾ, ವಿನಯ್​ ಕುಮಾರ್​ ಶರ್ಮಾ, ಅಕ್ಷಯ್​ ಕುಮಾರ್​ರನ್ನು ಫೆ.1ರಂದು ನೇಣಿಗೆ ಏರಿಸಬೇಕಿತ್ತು. ಆದರೆ ಈ ಮಧ್ಯೆ ಕೆಲವು ಕಾನೂನು ಪ್ರಕ್ರಿಯೆಗಳಿಂದಾಗಿ ದೆಹಲಿ ನ್ಯಾಯಾಲಯ ಅವರ ಮರಣದಂಡನೆಗೆ ತಡೆ ನೀಡಿತ್ತು. ಅದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದವು. ಫೆ.2ರಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಸುರೇಶ್​ ಕುಮಾರ್ ಕೈಟ್​ ತೀರ್ಪು ಕಾಯ್ದಿರಿಸಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net