

ದೆಹಲಿ: ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ದೆಹಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.
ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾರವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಈ ಹಂತದಲ್ಲಿ ಸಿಸೋಡಿಯಾ ಜಾಮೀನು ಪಡೆಯಲು ಅರ್ಹರಲ್ಲ ಎಂದು ಹೇಳಿದರು. ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಅಬಕಾರಿ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಹ ಆರೋಪಿಗಳಾದ ಉದ್ಯಮಿಗಳಾದ ಅಭಿಷೇಕ್ ಬೋನಪಲ್ಲಿ, ಬೆನೊಯ್ ಬಾಬು ಮತ್ತು ವಿಜಯ್ ನಾಯರ್ರ ಜಾಮೀನು ಅರ್ಜಿಗಳನ್ನು ಸಹ ಹೈಕೋರ್ಟ್ ವಜಾಗೊಳಿಸಿದೆ.
ದೆಹಲಿ ಅಬಕಾರಿ ನೀತಿ 2021-22 ರ ರಚನೆ ಮತ್ತು ಅನುಷ್ಠಾನದಲ್ಲಿ ಭ್ರಷ್ಟಾಚಾರದ ಆರೋಪದ ಮೇಲೆ ಮನೀಶ್ ಸಿಸೋಡಿಯಾರ ಕಳೆದ ಫೆಬ್ರವರಿ 26ರಂದು ಮೊದಲ ಬಾರಿಗೆ ಸಿಬಿಐನಿಂದ ಬಂಧನಕ್ಕೊಳಗಾಗಿದ್ದರು. ಈ ಕುರಿತ ಸಿಬಿಐ ಪ್ರಕರಣದಲ್ಲಿ ಮೇ 30ರಂದು ಹೈಕೋರ್ಟ್ ಈಗಾಗಾಲೇ ಜಾಮೀನು ನಿರಾಕರಿಸಿದೆ. ಇಡಿ ದಾಖಲಿಸಿದ ಪ್ರಕರಣದಲ್ಲಿ ಸಿಸೋಡಿಯಾ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.(ಏಜೆನ್ಸೀಸ್)