

ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕರೊನಾ ವೈರಸ್ ಹಾವಳಿ ನಿಯಂತ್ರಣಕ್ಕೆ ಬರುತ್ತಿದೆ. ಕಳೆದ ನಾಲ್ಕು ದಿನಗಳಿಂದ 19 ವೈರಸ್ ಸೋಂಕಿತ ಕೆಂಪು ವಲಯಗಳು ವೈರಸ್ ಮುಕ್ತ ಹಸಿರು ವಲಯಗಳಾಗಿ ಪರಿವರ್ತನೆಗೊಂಡಿವೆ.
ದೆಹಲಿಯ ಅಧಿಕಾರಿಗಳು ಕರೊನಾ ವೈರಸ್ ಹರಡುವುದನ್ನು ತಡೆಯಲು ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದ ಇದು ಸಾಧ್ಯವಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭದಲ್ಲಿ ವೈರಸ್ ತೀವ್ರವಾಗಿ ಹರಡುತ್ತಿತ್ತು. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ ನಂತರ ವೈರಸ್ ಹರಡುವುದು ಕಡಿಮೆಯಾಗಿದೆ.
19 ವಲಯಗಳು ಹಸಿರು ವಲಯಗಳಾಗಿ ಪರಿವರ್ತನೆಗೊಂಡಿದ್ದರೂ ಸರ್ಕಾರ ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ನಗರದಲ್ಲಿ ಇನ್ನು 90 ಕೆಂಪು ವಲಯಗಳು ಇವೆ. ಅಲ್ಲದೆ ಕೆಲವೊಂದು ಹೊಸ ಸ್ಥಳಗಳಲ್ಲಿ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ನಿಯಮ ಪಾಲಿಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ವೈರಸ್ ಸೋಂಕು ತಗುಲಿರುವ ಪ್ರಕರಣಗಳಲ್ಲಿ ಯಾವುದೇ ಗಂಭೀರತೆ ಇಲ್ಲ. ಹೀಗಾಗಿ ಅಂಥವರನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ಕೇಜ್ರಿವಾಲ್ ಹೇಳಿದರು. (ಏಜೆನ್ಸೀಸ್)