ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲಾಗುವ ಭಯ: ಅಪಹರಣ, ಅತ್ಯಾಚಾರ ಕತೆ ಕಟ್ಟಿದ ಬಾಲಕಿ!

SSLC Student
Published on

ನವದೆಹಲಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರಿಯಾಗಿ ಅಂಕ ಗಳಿಸಲು ಸಾಧ್ಯವಾಗಲಿಲ್ಲ ಅಂತಾ ಪಾಲಕರಿಗೆ ಹೆದರಿದ 14 ವರ್ಷದ ವಿದ್ಯಾರ್ಥಿನಿಯೊಬ್ಬಳು ಬೈಗುಳಗಳಿಂದ ತಪ್ಪಿಸಿಕೊಳ್ಳಲು ಲೈಂಗಿಕ ದೌರ್ಜನ್ಯ ಕತೆ ಕಟ್ಟಿದ ಪ್ರಕರಣ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.

ಈ ಘಟನೆ ದೆಹಲಿಯ ಭಜನಪುರದಲ್ಲಿ ನಡೆದಿದೆ. ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂಬುದನ್ನು ಮನೆಯವರಿಗೆ ನಂಬಿಸಲು ಬಾಲಕಿ ಬ್ಲೇಡ್‌ನಿಂದ ತನಗೆ ತಾನೇ ಹಾನಿ ಮಾಡಿಕೊಂಡಿದ್ದಾಳೆ.

ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಮೂವರು ಹುಡುಗರು ನನ್ನನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿ ಗಾಯಗೊಳಿಸಿದ್ದಾರೆ ಎಂದು ಬಾಲಕಿ ಮನೆಯವರಿಗೆ ತಿಳಿಸಿದ್ದಳು. ನಂತರ ಬಾಲಕಿಯ ಪಾಲಕರು ಇದೇ ತಿಂಗಳ 15ರಂದು ಭಜನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.

ತನಿಖೆಯ ಭಾಗವಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಬಾಲಕಿ ಸುಳ್ಳು ಹೇಳಿರುವುದು ಪೊಲೀಸರಿಗೆ ತಿಳಿದು ಬಂದಿದೆ. ದೃಶ್ಯಾವಳಿಗಳಲ್ಲಿ, ಬಾಲಕಿಯನ್ನು ಅಪಹರಣ ಮಾಡಲಾಗಿದೆ ಎಂದು ಹೇಳಲಾದ ಸ್ಥಳದಲ್ಲಿ ಏಕಾಂಗಿಯಾಗಿ ತಿರುಗಾಡಿರುವುದು ಕಂಡುಬಂದಿದೆ. ನಂತರ ಪೊಲೀಸರು ಬಾಲಕಿಗೆ ಕೌನ್ಸೆಲಿಂಗ್ ಮಾಡಿದಾಗ ಸಮಾಜ ವಿಜ್ಞಾನ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಮನೆಯವರಿಗೆ ಸುಳ್ಳು ಹೇಳಿರುವುದು ಬೆಳಕಿಗೆ ಬಂದಿದೆ. ಹೆತ್ತವರು ಬೈಯುತ್ತಾರೆ ಎಂಬ ಭಯವೂ ಇತ್ತು ಎಂದು ಬಾಲಕಿ ಹೇಳಿದ್ದಾಳೆ.

ಬಾಲಕಿಯನ್ನು ಮ್ಯಾಜಿಸ್ಟ್ರೇಟ್‌ಗೆ ಕರೆದೊಯ್ದು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡು ಪ್ರಕರಣವನ್ನು ರದ್ದುಗೊಳಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net