ನಿರ್ಭಯಾ ಕೇಸ್​: ಗಲ್ಲು ಶಿಕ್ಷೆ ಜಾರಿಗೊಳಿಸಲು ಹೊಸ ದಿನ ನಿಗದಿಗೊಳಿಸುವಂತೆ ಕೋರಿ ತಿಹಾರ್ ಜೈಲು ಅಧಿಕಾರಿಗಳು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ದೆಹಲಿ ಕೋರ್ಟ್​

Nirbhaya Convicts
Published on

ನವದೆಹಲಿ: ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಹೊಸ ದಿನಾಂಕ ನಿಗದಿಗೊಳಿಸುವಂತೆ ಕೋರಿ ತಿಹಾರ್ ಜೈಲಿನ ಅಧಿಕಾರಿಗಳು ಸಲ್ಲಿಸಿದ ಅರ್ಜಿಯನ್ನು ದೆಹಲಿ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ದೆಹಲಿ ಹೈಕೋರ್ಟ್​ ಫೆಬ್ರವರಿ 5ರಂದು ನೀಡಿದ ತೀರ್ಪಿನಂತೆ ಒಂದು ವಾರದೊಳಗೆ ಕಾನೂನು ಪ್ರಕ್ರಿಯೆಗೊಳಿಸಬೇಕು ಎಂದು ಹೇಳಿದ ಹೆಚ್ಚುವರಿ ಸೆಷನ್ಸ್ ಜಡ್ಜ್​ ಧರ್ಮೇಂದ್ರ ರಾಣಾ, ತಿಹಾರ್ ಜೈಲು ಅಧಿಕಾರಿಗಳು ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದರು.

ಕಾನೂನು ಅವರಿಗೆ ಬದುಕುವುದಕ್ಕೆ ಅವಕಾಶ ನೀಡಿದಾಗ ಗಲ್ಲು ಶಿಕ್ಷೆ ವಿಧಿಸುವುದು ಸರಿಯಾದ ಕ್ರಮವಲ್ಲ. ನ್ಯಾಯದ ಹಿತ ಕಾಪಾಡುವ ದೃಷ್ಟಿಯಿಂದ ಹೈಕೋರ್ಟ್​ ಅವರಿಗೆ ಒಂದು ವಾರದ ಕಾಲಾವಕಾಶ ನೀಡಿದ್ದು, ಅಪರಾಧಿಗಳು ಅಷ್ಟರೊಳಗೆ ಕಾನೂನು ಪ್ರಕಾರ ಏನೇನು ಮಾಡಬೇಕೋ ಅದನ್ನು ಮಾಡಿಮುಗಿಸಬೇಕು. ಹೀಗಿರುವಾಗ ಈ ರೀತಿ ಮತ್ತೊಮ್ಮೆ ದಿನಾಂಕ ನಿಗದಿ ಮಾಡುವಂತೆ ಕೋರಿ ಅರ್ಜಿ ಸಲ್ಲಿಸುವ ಕ್ರಮ ಇದಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿತು.

ವಿಚಾರಣಾ ನ್ಯಾಯಾಲಯ ಜನವರಿ 31ರಂದು ಮುಂದಿನ ಆದೇಶದ ತನಕ ನಾಲ್ವರು ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್​(32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ(26), ಅಕ್ಷಯರ್ ಕುಮಾರ್​(31) ಅವರ ಶಿಕ್ಷೆ ಜಾರಿಯನ್ನು ತಡೆಹಡಿದಿದೆ. ಅಲ್ಲದೆ, ಅವರನ್ನು ತಿಹಾರ್ ಜೈಲಿಗೇ ಕಳುಹಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net