ಅತ್ಯಾಚಾರಕ್ಕೊಳಗಾಗಿ, ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಬಾಲಕಿಗೆ ಸಿಎಂ ಭೇಟಿ

Arvind Kejriwal
Published on

ನವದೆಹಲಿ: ದುರುಳನೊಬ್ಬ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ತಲೆಗೆ ಕತ್ತರಿಯಿಂದ ಇರಿದು ಪರಾರಿಯಾದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ಮಂಗಳವಾರ ಇಲ್ಲಿಯ ಪೀರಾ ಗಾರ್ಹಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ರಕ್ತದ ಮಡುವಿನಲ್ಲಿ ಹೊರಳಾಡುತ್ತಿದ್ದ ಆಕೆಯನ್ನು ದಾರಿಹೋಕರು ಗಮನಿಸಿದಾಗ ಇದು ಬೆಳಕಿಗೆ ಬಂದಿದೆ. ಚಿಕಿತ್ಸೆಗಾಗಿ ಆಕೆಯನ್ನು ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ತೀವ್ರ ಬೇಸರ ವ್ಯಕ್ತಪಡಿಸಿದ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಬಾಲಕಿಯನ್ನು ಭೇಟಿಯಾಗಲು ಏಮ್ಸ್ ಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಘಟನೆಯಿಂದ ತೀವ್ರ ಬೇಸರವಾಗಿದ್ದು, ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಬಾಲಕಿ ಮೇಲೆ ಅಪರಿಚಿತ ವ್ಯಕ್ತಿ ಅತ್ಯಾಚಾರವೆಸಗಿ, ಕತ್ತರಿಗಳಿಂದ ಆಕೆಗೆ ತಲೆಗೆ ಇರಿದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆದರೂ ಇನ್ನೂ ಯಾರನ್ನೂ ಆರೋಪಿಗಳೆಂದು ಗುರುತಿಸಿಲ್ಲ.ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಕಳೆದ ಜುಲೈನಲ್ಲಿ, ಹರಿಯಾಣದಲ್ಲಿ 6 ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯಾತ ಅತ್ಯಾಚಾರವೆಸಗಿದ್ದ.  ಅಂದು, ಬಾಲಕಿಯ ತಾಯಿ ಕೆಲಸಕ್ಕೆ ಹೋಗಿದ್ದಾಗ ಆರೋಪಿ ಬಾಲಕಿಯ ಮನೆಗೆ ಬಂದು ವಾಶ್ ರೂಂನಲ್ಲಿ ಅತ್ಯಾಚಾರ ಎಸಗಿದ್ದ. ಕೆಲಸದಿಂದ ಮನೆಗೆ ಮರಳಿದಾಗ ಬಾಲಕಿ ಈ ಘಟನೆಯನ್ನು ತನ್ನ ತಾಯಿಗೆ ಹೇಳಿದಳು. ತಕ್ಷಣ ಪೊಲೀಸರಿಗೆ ದೂರು ನೀಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲಿಸರು ಆರೋಪಿಯನ್ನು ಬಂಧಿಸಿದರು. ಈ ಅತ್ಯಾಚಾರ ಘಟನೆಯಲ್ಲಿ ಕೂಡ ಆರೋಪಿ ಅಪ್ರಾಪ್ತ ಬಾಲಕಿಯ ಗುಪ್ತಾಂಗಗಳನ್ನು ಗಾಯಗೊಳಿಸಿದ್ದ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net