

Delhi CM Rekha Gupta : ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ಹಲ್ಲೆ ನಡೆದಿರುವ ಘಟನೆ ಸಿಎಂ ಅಧಿಕೃತ ನಿವಾಸದಲ್ಲಿ ಬುಧವಾರ (ಆಗಸ್ಟ್ 20) ನಡೆದಿದೆ. 'ಜನ್ ಸುನ್ವಾಯಿ' (ಜನಸಂಪರ್ಕ) ಕಾರ್ಯಕ್ರಮದ ವೇಳೆ ಹಲ್ಲೆ ನಡೆದಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಸಿಎಂ ಮೇಲೆ 35 ವರ್ಷದ ವ್ಯಕ್ತಿ ದಾಳಿ ನಡೆಸಿದ್ದು, ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದೇ ವೇಳೆ ಗುಪ್ತಾ ಅವರ ಮೇಲಿನ ದಾಳಿಯನ್ನು ಬಿಜೆಪಿಯ ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚ್ದೇವ ತೀವ್ರವಾಗಿ ಖಂಡಿಸಿದ್ದಾರೆ.
ಜನಸಂಪರ್ಕ ಸಮಯದಲ್ಲಿ ಹಲವಾರು ಜನರು ಸಿಎಂ ರೇಖಾ ಅವರನ್ನು ಸುತ್ತುವರೆದಿದ್ದರು. ಈ ವೇಳೆ ಬ್ಯಾಗ್ ಹಿಡಿದುಕೊಂಡು ಸಿಎಂ ಬಳಿಗೆ ಬಂದ ವ್ಯಕ್ತಿ, ಇದ್ದಕ್ಕಿದ್ದಂತೆ ದಾಳಿ ಮಾಡಿದನು. ಆ ವ್ಯಕ್ತಿ ಮೊದಲು ಗುಪ್ತಾಗೆ ಕೆಲವು ಕಾಗದಗಳನ್ನು ಹಸ್ತಾಂತರಿಸಿದನು. ಬಳಿಕ ಸಿಎಂ ಮೇಲೆ ಕೂಗಾಡಲು ಪ್ರಾರಂಭಿಸಿದನು. ಬಳಿಕ ಹಲ್ಲೆ ಮಾಡಿದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಕ್ಷಣವೇ ಅವನನ್ನು ಹಿಡಿದು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯನ್ನು ರಾಜೇಶ್ ಭಾಯ್ ಖಿಮ್ಜಿ ಭಾಯ್ ಸಕರಿಯಾ ಎಂದು ಗುರುತಿಸಲಾಗಿದೆ. ಈತ ರಾಜ್ಕೋಟ್ ನಿವಾಸಿ. ಸದ್ಯ ಪೊಲೀಸರು ಆತನನ್ನು ಇನ್ನೂ ಬಂಧನದಲ್ಲಿಟ್ಟುಕೊಂಡಿದ್ದಾರೆ. ಆತನ ಉದ್ದೇಶ ಏನಿತ್ತು ಎಂದು ತಿಳಿಯಲು ವಿವರವಾದ ವಿಚಾರಣೆ ನಡೆಸುತ್ತಿದ್ದಾರೆ.
ದೆಹಲಿ ಕಾಂಗ್ರೆಸ್ ಮುಖ್ಯಸ್ಥ ದೇವೇಂದರ್ ಯಾದವ್ ಕೂಡ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಘಟನೆಯನ್ನು ದುರಾದೃಷ್ಟಕರ ಎಂದು ಕರೆದಿದ್ದಾರೆ. ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಅವರು, ದೆಹಲಿಯ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು, ಮುಖ್ಯಮಂತ್ರಿಗಳೇ ಸುರಕ್ಷಿತವಾಗಿಲ್ಲದಿದ್ದರೆ, ರಾಷ್ಟ್ರ ರಾಜಧಾನಿಯಲ್ಲಿ ಸಾಮಾನ್ಯ ವ್ಯಕ್ತಿ ಹೇಗೆ ಸುರಕ್ಷಿತವಾಗಿರಲು ಸಾಧ್ಯ ಎಂದು ಟೀಕಿಸಿದರು. (ಏಜೆನ್ಸೀಸ್)