

Loan Harassment : ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಅವರ ಪತ್ನಿಯಿಂದ ನಿರಂತರವಾಗಿ ಕಿರುಕುಳ ಅನುಭವಿಸಿದ ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಕೇರಳದ ಪರಾವೂರ್ ತಾಲೂಕಿನಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಆಶಾ (46) ಎಂದು ಗುರುತಿಸಲಾಗಿದೆ. ಈಕೆ ಎರ್ನಾಕುಲಂನ ಕೊಟ್ಟುವಳ್ಳಿ ದಕ್ಷಿಣದ ಪೊಕ್ಕತ್ ದೇವಸ್ಥಾನದ ಬಳಿಯ ಪುಲಿಕಥರ ನಿವಾಸಿ. ಕೊಟ್ಟುವಳ್ಳಿಯ ನಿವೃತ್ತ ಪೊಲೀಸ್ ಚಾಲಕ ಪ್ರದೀಪ್ ಕುಮಾರ್ ಮತ್ತು ಅವರ ಪತ್ನಿ ಬಿಂದು ಅವರಿಂದ ಸಾಲ ಪಡೆದಿದ್ದರು. ಅವರ ನಿರಂತರ ಕಿರುಕುಳದಿಂದ ಬೇಸತ್ತು ಸಾವಿಗೆ ಶರಣಾಗಿದ್ದಾರೆ.
ಪೊಲೀಸರ ಪ್ರಕಾರ, ಆಶಾ ನಾಲ್ಕು ಪುಟಗಳ ಡೆತ್ನೋಟ್ ಬರೆದಿದ್ದಾರೆ. ಅದರಲ್ಲಿ, ಸಾಲ ಪಡೆದ ಹಣಕ್ಕೆ ದುಪ್ಪಟ್ಟು ಹಣ ಮರುಪಾವತಿಸಿದರೂ ಪ್ರದೀಪ್ ಕುಮಾರ್ ಮತ್ತು ಬಿಂದು ಪದೇ ಪದೇ ಬೆದರಿಕೆ ಹಾಕುತ್ತಿದ್ದರು. ಆ ದಂಪತಿ ನನ್ನ ಮಕ್ಕಳ ಖ್ಯಾತಿಗೆ ಧಕ್ಕೆ ತರಲು ಪ್ರಯತ್ನಿಸಿದರು ಎಂದು ಆಶಾ ಆರೋಪಿಸಿದ್ದಾರೆ.
2022 ರಲ್ಲಿ, ಆಶಾ ಮನೆ ಕಟ್ಟಲೆಂದು ಬಿಂದು ಅವರಿಂದ 10 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದಾದ ನಂತರ ಎರಡು ಪಟ್ಟು ಹಣವನ್ನು ಮರುಪಾವತಿಸಿದ್ದರು. ಆದರೂ, ಪ್ರದೀಪ್ ದಂಪತಿ ಹೆಚ್ಚಿನ ಹಣವನ್ನು ಕೇಳಿದರು ಎನ್ನಲಾಗಿದೆ. ಒತ್ತಡವನ್ನು ಸಹಿಸಲಾಗದೆ, ಆಶಾ, ಆಗಸ್ಟ್ 11 ರಂದು ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಈ ವೇಳೆ ಆಕೆಯ ಕುಟುಂಬಸ್ಥರು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆಯ ನಂತರ ಆಶಾ ಅವರು ಬದುಕುಳಿದರು. ಆದರೆ, ಮನೆಗೆ ಹಿಂದಿರುಗಿದ ನಂತರ, ಇನ್ನೂ 18 ಲಕ್ಷ ರೂಪಾಯಿ ಬಾಕಿ ಇದೆ ಎಂದು ಹೇಳುವ ಸ್ಟಾಂಪ್ ಪೇಪರ್ ದಾಖಲೆಗೆ ಸಹಿ ಹಾಕುವಂತೆ ದಂಪತಿ ಒತ್ತಾಯಿಸಿದರು ಎನ್ನಲಾಗಿದೆ. ಆದರೆ ಆಶಾ ಅವರು ಅದನ್ನು ನಿರಾಕರಿಸಿದರು.
ಬೆದರಿಕೆಗಳು ಮುಂದುವರಿದಂತೆ, ಆಶಾ ಅವರು ಆಲುವಾ ಎಸ್ಪಿಗೆ ದೂರು ನೀಡಿದರು. ಬಳಿಕ ಎಸ್ಪಿ ಅವರು ಪರವೂರು ಸರ್ಕಲ್ ಇನ್ಸ್ಪೆಕ್ಟರ್ಗೆ ತನಿಖೆ ನಡೆಸಲು ಸೂಚಿಸಿದರು. ಪೊಲೀಸರು ಎರಡೂ ಕಡೆಯವರನ್ನು ಕರೆದು ವಿವಾದವಿದ್ದರೆ ನ್ಯಾಯಾಲಯಕ್ಕೆ ಹೋಗಬೇಕೆ ಹೊರತು, ಆಶಾ ಅವರ ಮನೆಯಲ್ಲಿ ತೊಂದರೆ ಸೃಷ್ಟಿಸಬಾರದು ಎಂದು ಪ್ರದೀಪ್ ಕುಮಾರ್ ಮತ್ತು ಬಿಂದು ದಂಪತಿಗೆ ಪೊಲೀಸರು ಸೂಚಿಸಿದರು.
ಆದರೆ, ಸೋಮವಾರ (ಆಗಸ್ಟ್ 18) ರಾತ್ರಿ 8 ಗಂಟೆ ಸುಮಾರಿಗೆ ಪ್ರದೀಪ್ ಕುಮಾರ್ ಮತ್ತು ಬಿಂದು ಮತ್ತೆ ಆಶಾ ಅವರ ಮನೆಗೆ ಬಂದು ಸಮಸ್ಯೆ ಉಂಟು ಮಾಡಿದ್ದಾರೆ. ಈ ವೇಳೆ ಆಶಾ ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿದರೂ ಪೊಲೀಸರು ಬರಲಿಲ್ಲ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಮಂಗಳವಾರ (ಆಗಸ್ಟ್ 19) ಮಧ್ಯಾಹ್ನದ ಹೊತ್ತಿಗೆ, ಅವರ ಮಗಳು ಮನೆಯಲ್ಲಿದ್ದಾಗ, ಆಶಾ ಹೊರಗೆ ಹೋಗಿದ್ದಾರೆ. ಬಹಳ ಸಮಯವಾದರೂ ಹಿಂತಿರುಗದಿದ್ದಾಗ ಮಗಳು ಹತ್ತಿರದ ನದಿಯ ದಡಕ್ಕೆ ಹೋಗಿ ನೋಡಿದಂತಹ ಸಂದರ್ಭದಲ್ಲಿ ತಾಯಿಯ ಚಪ್ಪಲಿಗಳು ಪತ್ತೆಯಾದವು. ನಂತರ ಅಗ್ನಿಶಾಮಕ ದಳದವರು ನದಿಯಿಂದ ಶವವನ್ನು ಹೊರತೆಗೆದರು. ಶವವನ್ನು ಪರವೂರು ತಾಲ್ಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. (ಏಜೆನ್ಸೀಸ್)