ರಾಜೀನಾಮೆಗೆ ಲೆಫ್ಟಿನೆಂಟ್ ಗವರ್ನರ್ ಭೇಟಿಗೆ ಕಾಲಾವಕಾಶ ಕೇಳಿದ ಕೇಜ್ರಿವಾಲ್​.. ಟೈಮ್ ಫಿಕ್ಸ್!

arvind kejrival
Published on

ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ನಲವತ್ತೆಂಟು ಗಂಟೆಗಳಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿರುವ ಅರವಿಂದ್ ಕೇಜ್ರಿವಾಲ್ ಅವರು ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರನ್ನು ಭೇಟಿ ಮಾಡಲು ಅಪಾಯಿಂಟ್ ಮೆಂಟ್ ಕೇಳಿದ್ದಾರೆ.

ಮಂಗಳವಾರ ಸಂಜೆ 4.30ಕ್ಕೆ ಲೆಫ್ಟಿನೆಂಟ್ ಗವರ್ನರ್ ಭೇಟಿಯಾಗಲು ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಕೇಜ್ರಿವಾಲ್ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ನಡುವೆ ಆಪ್​ ಪಕ್ಷದ ಮುಖಂಡರೊಬ್ಬರು ಕೇಜ್ರಿವಾಲ್​ ಚುನಾವಣೆವರೆಗೂ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಪಕ್ಷದ ಸಭೆಯಲ್ಲಿ ಘೋಷಿಸಿದ ಹಿನ್ನೆಲೆಯಲ್ಲಿ ರಾಜಿನಾಮೆ ಬಗ್ಗೆ ಇನ್ನೂ ನಿಗೂಢತೆ ಮುಂದುವರಿದಿದೆ.

ಆಪ್​ ಹಿರಿಯ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ರಾಘವ್ ಚಡ್ಡಾ ಅವರು ಸೋಮವಾರ ಬೆಳಗ್ಗೆ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದರು. ಮತ್ತೊಂದೆಡೆ, ಕೇಜ್ರಿವಾಲ್ ಜೈಲಿನಲ್ಲಿದ್ದಾಗ ಪಕ್ಷದ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ ಅತಿಶಿ ಮುಖ್ಯಮಂತ್ರಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೇ ವೇಳೆ ಸುನೀತಾ ಕೇಜ್ರಿವಾಲ್ ಮತ್ತು ಗೋಪಾಲ್ ರಾಯ್ ಹೆಸರು ಕೂಡ ಕೇಳಿ ಬರುತ್ತಿದೆ.

ಕಳೆದ ಶುಕ್ರವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೇಜ್ರಿವಾಲ್, ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅನಿರೀಕ್ಷಿತವಾಗಿ ರಾಜೀನಾಮೆ ಘೋಷಿಸಿದ್ದರು. ಇನ್ನು 48 ಗಂಟೆಗಳಲ್ಲಿ ರಾಜೀನಾಮೆ ನೀಡುತ್ತೇನೆ. ಸುಪ್ರೀಂ ಕೋರ್ಟ್ ತನಗೆ ನ್ಯಾಯ ನೀಡಿದ್ದು, ಸಾರ್ವಜನಿಕ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕ ನಂತರವೇ ಸಿಎಂ ಗದ್ದುಗೆಗೆ ಮರಳುತ್ತೇನೆ ಎಂದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net