

ಹೊಸದಿಲ್ಲಿ: ವಿವಿಧ ಬೇಡಿಕೆಗಳನ್ನು ಪೂರೈಸುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ಇತರೆ ಅನೇಕ ರೈತ ಸಂಘಟನೆಗಳಿಂದ ಇಂದು (ಫೆ.13) ಸಂಸತ್ತಿನ ಹೊರಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ದೆಹಲಿ ಚಲೋ ಮೆರವಣಿಗೆಗೆ ಕರೆ ಕೊಟ್ಟಿವೆ. ಈ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಪೊಲೀಸ್ ಅಧಿಕಾರಿಗಳು, ಪಂಜಾಬ್, ಹರಿಯಾಣದ ಗಡಿ ಭಾಗಗಳಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಇಂದಿನಿಂದ ಒಂದು ತಿಂಗಳವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಹರ್ಯಾಣ ಮತ್ತು ಪಂಜಾಬ್‌ನ ಪ್ರತಿಭಟನಾ ನಿರತ ರೈತರು ಮಂಗಳವಾರ ಬೆಳಗ್ಗೆ 10 ಗಂಟೆಗೆ ದೆಹಲಿ ಕಡೆಗೆ ತಮ್ಮ ಮೆರವಣಿಗೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ. 'ದೆಹಲಿ ಚಲೋ' ಪ್ರತಿಭಟನೆ ಮೂಲಕ 20ಕ್ಕೂ ಹೆಚ್ಚು ರೈತ ಸಂಘಗಳು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೇಲಿನ ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ದೆಹಲಿಯತ್ತ ಮುಖಮಾಡಿವೆ.
ಸದ್ಯ ಈ ಪ್ರತಿಭಟನೆ ಬೃಹತ್ ಮಟ್ಟದಲ್ಲಿ ನಡೆಯುತ್ತಿದ್ದು, ರೈತರು ದೆಹಲಿ ಪ್ರವೇಶಿಸದಂತೆ ಪೊಲೀಸರು ಕಾಂಕ್ರೀಟ್ ತಡೆ, ಬ್ಯಾರಿಕೇಡ್ ಮತ್ತು ಮುಳ್ಳುತಂತಿಗಳನ್ನು ಅಳವಡಿಸುವ ಮೂಲಕ ರೈತರನ್ನು ತಡೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ದೆಹಲಿ ಮತ್ತು ಎನ್‌ಸಿಆರ್‌ಗೆ ವಾಹನ ಸಂಚಾರದ ಕುರಿತಂತೆ ಈಗಾಗಲೇ ಅಗತ್ಯ ಸಲಹೆಗಳನ್ನು ನೀಡಲಾಗಿದೆ ಮತ್ತು ಟ್ರಾಫಿಕ್ ಸಮಸ್ಯೆಗಳನ್ನು ನಿವಾರಿಸಲು ಹೆಚ್ಚು ಗಮನ ಹರಿಸಲಾಗಿದೆ,(ಏಜೆನ್ಸೀಸ್).