

ದುಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ, ಕ್ರಿಕೆಟ್ ಆಡುವ ವೇಳೆ ಸ್ಪಿನ್ನರ್‌ಗಳಿಗೆ ಸಿಕ್ಸರ್ ಸಿಡಿಸುವುದರಲ್ಲಿ ಎತ್ತಿದ ಕೈ. ಗಂಗೂಲಿ ಅವರ ಸಿಕ್ಸರ್ ಹೊಡೆತಗಳಿಗೆ ಮನಸೋಲದ ಕ್ರಿಕೆಟ್ ಪ್ರಿಯರಿಲ್ಲ. ಯುವ ಕ್ರಿಕೆಟಿಗರಂತೂ ಅವರ ಸಿಕ್ಸರ್‌ಗಳಿಗೆ ಫಿದಾ ಆಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ರಿಷಭ್ ಪಂತ್ ಅಭ್ಯಾಸದ ವೇಳೆ ಸ್ಪಿನ್ನರ್‌ಗಳಿಗೆ ಆಕರ್ಷಕ ಸಿಕ್ಸರ್ ಸಿಡಿಸಿ ಗಮನಸೆಳೆದಿದ್ದಾರೆ. ಜತೆಗೆ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಸಿಡಿಸುತ್ತಿದ್ದ ಸಿಕ್ಸರ್‌ಗಳು ನೆನಪಿಗೆ ಬಂದವು ಎಂದು ಡೆಲ್ಲಿ ಕ್ಯಾಪಿಟಲ್ಸ್ ವಿಡಿಯೋ ಸಮೇತ ಟ್ವೀಟ್ ಮಾಡಿದೆ.
13ನೇ ಐಪಿಎಲ್‌ಗೆ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದೆ. 8 ತಂಡಗಳೂ ಕಠಿಣ ಅಭ್ಯಾಸದಲ್ಲಿ ತೊಡಗಿವೆ. ಕಳೆದ 6 ತಿಂಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಭಾರತೀಯ ಕ್ರಿಕೆಟಿಗರು, ಐಪಿಎಲ್‌ಗಾಗಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ಡೆಲ್ಲಿ ತಂಡ ಶಾರ್ಜಾದಲ್ಲಿ ಅಭ್ಯಾಸ ನಡೆಸುತ್ತಿದೆ. ತಂಡದ ಪ್ರಮುಖ ಅಸ ರಿಷಭ್ ಪಂತ್, ಯುಎಇಗೂ ತೆರಳುವುದಕ್ಕೂ ಮೊದಲು ಸುರೇಶ್ ರೈನಾ ಜತೆಗೂಡಿ ಗಾಜಿಯಾಬಾದ್‌ನಲ್ಲಿ ಅಭ್ಯಾಸ ಆರಂಭಿಸಿದ್ದರು. ಧೋನಿ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡಿರುವ ರಿಷಭ್ ಪಂತ್ ಸ್ಫೋಟಕ ಬ್ಯಾಟಿಂಗ್‌ಗೂ ಹೆಸರಾದವರು. ಶಾರ್ಜಾದಲ್ಲಿ ಡೆಲ್ಲಿ ತಂಡದ ಅಭ್ಯಾಸದ ವೇಳೆ ಪಂತ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದಾರೆ.
ಮಾರ್ಚ್ 29 ರಿಂದ ಆರಂಭಗೊಳ್ಳಬೇಕಿದ್ದ ಐಪಿಎಲ್ ಕರೊನಾ ವೈರಸ್ ಕಾಟದಿಂದಾಗಿ ಮುಂದೂಡಲಾಗಿತ್ತು. ಇದೀಗ ಸೆ.19 ರಿಂದ ನ.10ರವರೆಗೆ ಯುಎಇಯ ದುಬೈ, ಶಾರ್ಜಾ ಹಾಗೂ ಅಬುಧಾಬಿಯಲ್ಲಿ ನಡೆಯಲಿದೆ.