ದೆಹಲಿ ಕಾರು ಸ್ಫೋಟ ಪ್ರಕರಣ: ಟ್ರಾಫಿಕ್​ ನಡುವೆ ಸಿಡಿದ ಕಾರು, ಸಿಸಿಟಿವಿಯ ಭಯಾನಕ ದೃಶ್ಯ ವೈರಲ್​! Delhi Blast

Delhi Blast
Published on

ನವದೆಹಲಿ: ಸೋಮವಾರ ಸಂಜೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣ ( Delhi Blast ) ಇಡೀ ದೇಶದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿ ಮಾಡಿದೆ. ಈ ಸ್ಫೋಟದ ಕಾರಣ ಇನ್ನೂ ನಿಗೂಢವಾಗಿಯೇ ಇದೆ. ಇದರ ನಡುವೆ ತನಿಖಾ ತಂಡಗಳು ತಮ್ಮ ತನಿಖೆಯನ್ನು ಚುರುಕುಗೊಳಿಸಿದ್ದು, ಇದೀಗ ಸ್ಫೋಟಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ನಿಧಾನಗತಿಯ ಟ್ರಾಫಿಕ್​ನಲ್ಲಿ ಏಕಾಏಕಿ ಕಾರು ಸ್ಫೋಟಗೊಂಡ ಭಯಾನಕ ದೃಶ್ಯ ವಿಡಿಯೋದಲ್ಲಿದೆ.

ಸಿಸಿಟಿವಿಯಲ್ಲಿ ಸೆರೆಯಾದ ಘಟನೆಯ 15 ಸೆಕೆಂಡುಗಳ ದೃಶ್ಯದಲ್ಲಿ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಜನದಟ್ಟಣೆಯ ಪ್ರದೇಶವನ್ನು ಕಾಣಬಹುದು. ಅಲ್ಲಿ ಡಜನ್​ಗಟ್ಟಲೆ ವಾಹನಗಳು ನಿಧಾನವಾಗಿ ಚಲಿಸುತ್ತಿರುತ್ತವೆ. ಈ ವೇಳೆ ಹ್ಯೂಂಡೈ ಐ20 ಕಾರು ಏಕಾಏಕಿ ಸ್ಫೋಟಗೊಳ್ಳುತ್ತದೆ. ಕಾರು ಸ್ಫೋಟಗೊಂಡಾಗ ಬೆಂಕಿಯ ಜ್ವಾಲೆ ಸಿಡಿಯುವ ದೃಶ್ಯವನ್ನು ಸಿಸಿಟಿವಿಯಲ್ಲಿ ಕಾಣಬಹುದು.

ಅಂದಹಾಗೆ ಈ ದುರ್ಘಟನೆಯಲ್ಲಿ 9 ಮಂದಿ ಸಾವಿಗೀಡಾಗಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸದ್ಯ ಬಂಧನದಲ್ಲಿರುವ ಶಂಕಿತ ಉಗ್ರ ಡಾ. ಮುಜಾಮಿಲ್​ ಶಕೀಲ್​, ವಿಚಾರಣೆ ವೇಳೆ ಭಯಾನಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಆತನ ಪ್ರಕಾರ, ಈ ದಾಳಿ ಮೊದಲೇ ನಡೆಯಬೇಕಿತ್ತು. ದೀಪಾವಳಿಗೆ ಪ್ಲಾನ್​ ಮಾಡಿದ್ದರು ಆದರೆ, ಅದು ಸಾಧ್ಯವಾಗದೇ ಇದ್ದಾಗ, ಮುಂದಿನ ವರ್ಷ ಜನವರಿ 26 ಗಣರಾಜ್ಯೋತ್ಸವದಂದು ಪ್ಲಾನ್​ ಮಾಡಿದ್ದರು. ಆದರೆ, ಅವರ ಪ್ಲಾನ್​ ಫೇಲ್​ ಆಗಿದೆ.

ಅಂದಹಾಗೆ, ವೈಟ್-ಕಾಲರ್ ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಹರಿಯಾಣ ಪೊಲೀಸರು ಸೋಮವಾರ ಬೆಳಗ್ಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸ್ಫೋಟಗೊಂಡ ಕಾರಿನಲ್ಲಿದ್ದ ಶಂಕಿತ ಸೂಸೈಡ್​ ಬಾಂಬರ್​ ಡಾ. ಉಮರ್ ನಬಿಯ ಸಹಚರರಾದ ಡಾ. ಮುಜಮ್ಮಿಲ್ ಶಕೀಲ್ ಹಾಗೂ ಡಾ. ಅದೀಲ್ ಅಹ್ಮದ್ ರಾಥರ್​ ಎಂಬುವರನ್ನು ಬಂಧಿಸಲಾಯಿತು. ಅಲ್ಲದೆ, ಪೊಲೀಸರು 2,900 ಕೆಜಿ ಸ್ಫೋಟಕಗಳು ಮತ್ತು ಅಸಾಲ್ಟ್ ರೈಫಲ್‌ಗಳು ಮತ್ತು ಪಿಸ್ತೂಲ್‌ಗಳಂತಹ ಶಸ್ತ್ರಾಸ್ತ್ರಗಳನ್ನು ಸಹ ಸೀಜ್​ ಮಾಡಿದರು.

ಉಮರ್​, ತನ್ನ ಸಹಚರರೊಂದಿಗೆ ಸೇರಿ ಭೀಕರ ದಾಳಿಗೆ ಯೋಜಿಸಿದ್ದ. ತನ್ನ ಪ್ಲಾನ್​ ಭಾಗವಾಗಿ ತನ್ನ ಕಾರಿನಲ್ಲಿ ಡಿಟೋನೇಟರ್ ಅನ್ನು ಇಟ್ಟಿದ್ದ. ಆದರೆ, ಸಹಚರರ ಬಂಧನ ಉಮರ್​ ಎದೆಯಲ್ಲಿ ನಡುಕ ಹುಟ್ಟಿಸಿತು. ಅದೇ ಗಾಬರಿಯಲ್ಲಿ ಆತ ಕಾರು ಸ್ಫೋಟಿಸಿದ್ದಾನೆ ಎಂಬ ಮಾಹಿತಿ ಇದೆ. ಆದರೆ, ಸ್ಫೋಟಕಗಳನ್ನು ಬೇರೆಡೆ ಸಾಗಿಸುವಾಗ ಅಚಾನಕ್ಕಾಗಿ ಸ್ಫೋಟಗೊಂಡಿದೆ ಎಂಬ ವಾದವೂ ಇದೆ. ಸದ್ಯ ಸ್ಫೋಟದ ನಿಗೂಢತೆ ಹಾಗೇ ಉಳಿದಿದ್ದು. ತನಿಖಾ ತಂಡಗಳು ತನಿಖೆಯನ್ನು ಚುರುಕುಗೊಳಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net