ಬಿಜೆಪಿ ಹಿರಿಯ ನಾಯಕ ಎಲ್​ಕೆ ಅಡ್ವಾಣಿ ದೆಹಲಿಯ ಆಸ್ಪತ್ರೆಯಿಂದ ಬಿಡುಗಡೆ

lk
Published on

ನವದೆಹಲಿ: ಬಿಜೆಪಿ ಹಿರಿಯ ನಾಯಕ ಮತ್ತು ಭಾರತ ರತ್ನ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಗುರುವಾರ ಸಂಜೆ 5 ಗಂಟೆಗೆ ಇಲ್ಲಿನ ಅಪೋಲೋ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಗ್ಯದಲ್ಲಿ ಏರುಪಾರಾದ ಕಾರಣ ಬುಧವಾರ ರಾತ್ರಿ 9 ಗಂಟೆ ಸಮಯದಲ್ಲಿ ಅವರನ್ನು ಅಫೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಅಡ್ವಾಣಿ ಅವರು ಬಳಲುತ್ತಿದ್ದಾರೆ.

ಮಾಜಿ ಉಪಪ್ರಧಾನಿ ಎಲ್​ಕೆ ಅಡ್ವಾಣಿ ಅವರಿಗೆ ಅಪೋಲೋ ಆಸ್ಪತ್ರೆಯಲ್ಲಿ ಡಾ. ವಿನಿತ್ ಸೂರಿ ಚಿಕಿತ್ಸೆ ನೀಡಿದ್ದರು. ಇದೀಗ ಅವರ ಆರೋಗ್ಯ ಸುಧಾರಿಸಿದ್ದು, ಸ್ಥಿತಿ ಸ್ಥಿರವಾಗಿದೆ ಎಂದು ಅಪೋಲೋ ಆಸ್ಪತ್ರೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ.

ಕಳೆದ ವಾರವೂ ಅನಾರೋಗ್ಯದಿಂದ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ ಅಡ್ವಾಣಿ ಅವರನ್ನು ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಡಿಸ್ಚಾರ್ಜ್ ಮಾಡಲಾಗಿತ್ತು. ಆಸ್ಪತ್ರೆ ಮೂಲಗಳ ಪ್ರಕಾರ, ಜೂನ್ 26 ರಂದು ರಾತ್ರಿ 10.30 ರ ಸುಮಾರಿಗೆ ಅಡ್ವಾಣಿ ಅವರನ್ನು ಏಮ್ಸ್‌ಗೆ ದಾಖಲಿಸಲಾಗಿತ್ತು. ಅವರು ಮೂತ್ರಶಾಸ್ತ್ರ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಸಂಜೆ ಮತ್ತೆ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಯೋಧ್ಯೆ ರಾಮಮಂದಿರ ಹೋರಾಟದ ಮೂಲಕ ಹಿಂದುತ್ವದ ಬದ್ಧ ಪ್ರತಿಪಾದಕ ಲೋಹ ಪುರುಷ ಎಂದೇ ಗುರುತಿಸಿಕೊಂಡಿದ್ದ ಅಡ್ವಾಣಿ 1972ರ ನವೆಂಬರ್​ 8ರಂದು ಅವಿಭಜಿತ ಭಾರತದ ಕರಾಚಿಯಲ್ಲಿ ಜನಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net