

Delhi Assembly Election: ದೆಹಲಿ ವಿಧಾನಸಭಾ ಚುನಾವಣೆ 2025ರ ಮತದಾನ ಪ್ರಕ್ರಿಯೆ ಇಂದು ಬೆಳಗ್ಗೆ 7ರಿಂದ ಆರಂಭಗೊಂಡಿದೆ. ಪ್ರಧಾನ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಂದಾಳತ್ವದ ಆಮ್ ಆದ್ಮಿ ಪಕ್ಷದ ನಡುವೆ ಗೆಲುವಿಗಾಗಿ ಭಾರೀ ಪೈಪೋಟಿ ಶುರುವಾಗಿದ್ದು, ಗೆಲುವಿನ ನಿರೀಕ್ಷೆಯಲ್ಲಿರುವ ಎಎಪಿಗೆ ಈಗ ಬಿಗ್ ಶಾಕ್ವೊಂದು ಎದುರಾಗಿದೆ.
ದೆಹಲಿ ಚುನಾವಣೆ ಮತದಾನಕ್ಕೂ ಮುನ್ನವೇ 'ಹರಿಯಾಣ ಯಮುನಾ ನದಿಯನ್ನು ವಿಷಪೂರಿತಗೊಳಿಸುತ್ತಿದೆ' ಎಂಬ ಕೇಜ್ರಿವಾಲ್ ಹೇಳಿಕೆ ವಿರುದ್ಧ ಈಗ ಪ್ರಕರಣ ದಾಖಲಾಗಿದೆ. ಗಂಭೀರ ಆರೋಪದ ಮೇರೆಗೆ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹರಿಯಾಣದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ದೂರು ಸಲ್ಲಿಸಲಾಗಿದೆ.
ಗಲಭೆಯನ್ನು ಪ್ರಚೋದಿಸುವುದು, ದ್ವೇಷವನ್ನು ಉತ್ತೇಜಿಸುವುದು, ಹಾನಿ ಮಾಡುವ ಉದ್ದೇಶದಿಂದ ಯಾರನ್ನಾದರೂ ಅಪರಾಧದ ಸುಳ್ಳು ಆರೋಪಕ್ಕೆ ಗುರಿಯಾಗಿಸುವುದು ಮತ್ತು ನಾಗರಿಕರ ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳನ್ನು ಎಸಗುವುದು ದೂರಿನಲ್ಲಿ ಸೇರಿವೆ. ಕಳೆದ ವಾರ ಚುನಾವಣೆಗೂ ಮುನ್ನ ಕೇಜ್ರಿವಾಲ್ ನೀಡಿದ ಹೇಳಿಕೆ ಇದಾಗಿದ್ದು, ಸದ್ಯ ದೊಡ್ಡ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದನ್ನೂ ಮೀರಿ ಈ ವಿಷಯ ಚುನಾವಣಾ ಆಯೋಗದ ಮೆಟ್ಟಿಲೇರಿದೆ,(ಏಜೆನ್ಸೀಸ್).