

ನವದೆಹಲಿ: ಫೇಸ್ಬುಕ್ ಖಾತೆ ತೊರೆಯಿರಿ, ಇಲ್ಲವೇ ಕೆಲಸ ಬಿಡಿ. ಆಯ್ಕೆ ನಿಮ್ಮದು ಎಂದು ದೆಹಲಿ ಹೈಕೋರ್ಟ್ ಬುಧವಾರ ಸೇನಾಧಿಕಾರಿ ಒಬ್ಬರಿಗೆ ಖಡಕ್ ಸೂಚನೆ ನೀಡಿದೆ.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಂಥ ಸಾಮಾಜಿಕ ಮಾಧ್ಯಮ ಜಾಲ ವೇದಿಕೆಗಳನ್ನು ಬಳಸುವುದನ್ನು ನಿಷೇಧಿಸಿ ರಕ್ಷಣಾ ಸಚಿವಾಲಯ ಇತ್ತೀಚೆಗೆ ರೂಪಿಸಿದ್ದ ನಿಯಮವನ್ನು ಪ್ರಶ್ನಿಸಿದ್ದ ಲೆಫ್ಟಿನೆಂಟ್ ಕರ್ನಲ್ ಪಿ.ಕೆ. ಚೌಧರಿ ನ್ಯಾಯಾಲಯದ ಕೆಂಗಣ್ಣಗೆ ಗುರಿಯಾಗಿದ್ದಾರೆ. ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಸೇನಾ ಸಿಬ್ಬಂದಿ ಸಾಮಾಜಿಕ ತಾಣಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.
ಹೀಗಾಗಿ ಈ ನಿಯಮವನ್ನು ಪಾಲಿಸಬೇಕು ಅಥವಾ ರಾಜೀನಾಮೆ ನಿಡಬೇಕು ಎಂದು ನ್ಯಾಯಮೂರ್ತಿಗಳಾದ ರಾಜೀವ್ ಸಹಾಯ್ ಮತ್ತು ಆಶಾ ಮೆನನ್ ಇದ್ದ ಪೀಠ ಸೂಚಿಸಿದೆ. ಮತ್ತು ಜುಲೈ 21ಕ್ಕೆ ವಿಚಾರಣೆ ಮುಂದೂಡಿಕೆಯಾಗಿದೆ.