

ಜಿ.ನಾಗರಾಜ್ ಬೂದಿಕೋಟೆ
ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲಾಗಿ ನೀಡಬೇಕಿದ್ದ ಆಗಸ್ಟ್ ತಿಂಗಳ ಹಣ ಫಲಾನುಭವಿ ಖಾತೆಗೆ ಜಮೆ ಆಗದ ಕಾರಣ ಜನರಲ್ಲಿ ಅನುಮಾನ ಕಾಡಲಾರಂಭಿಸಿದೆ.
ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಅಕ್ಕಿ ಖರೀದಿಸಿ ನೀಡಲು ಸಾಧ್ಯವಾಗದ ಕಾರಣ 5 ಕೆಜಿ ಅಕ್ಕಿ ವಿತರಣೆ ಮಾಡಿ ಉಳಿದ 5 ಕೆಜಿ ಬದಲು ಪ್ರತಿ ಕೆಜಿಗೆ 34 ರೂ. ನಂತೆ ನೀಡಲು ನಿರ್ಧರಿಸಿತ್ತು. ಅದಕ್ಕಾಗಿ ಕೋಲಾರ ಮತ್ತು ಮೈಸೂರು ಜಿಲ್ಲೆಗಳನ್ನು ಪ್ರಾಯೋಗಿಕ ಅನುಷ್ಠಾನಕ್ಕೆ ಆಯ್ಕೆ ಮಾಡಲಾಗಿತ್ತು. ಜಿಲ್ಲೆಯಲ್ಲಿ 3.76 ಲಕ್ಷಕ್ಕೂ ಹೆಚ್ಚಿನ ಪಡಿತರ ಕಾರ್ಡ್ಗಳಿದ್ದು, ಜುಲೈ 10ರಂದು 16.80 ಕೋಟಿ ರೂ. ಲಾನುಭವಿಗಳ ಖಾತೆಗೆ ಜಮೆ ಆಗಿತ್ತು. ಆಗಸ್ಟ್ನಲ್ಲಿ ಪಡಿತರ ಕಾರ್ಡ್ಗಳ ತಿದ್ದುಪಡಿ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡಿಕೊಂಡಿರುವ ಕಾರಣ ವರ್ಗಾವಣೆಯಾಗಬೇಕಿರುವ ಹಣ 18.26 ಕೋಟಿಗೆ ತಲುಪಿದೆ. ಆದರೆ ಇರುವರೆಗೆ ಹಣ ಜಮೆ ಆಗದ ಕಾರಣ, 5 ಕೆಜಿ ಅಕ್ಕಿ ಜತೆಗೆ ಉಳಿದ 5 ಕೆಜಿ ಅಕ್ಕಿ ಪೂರೈಕೆ ಮಾಡಲಾಗುತ್ತದೆ. ಅಕ್ಕಿ ಬದಲಿಗೆ ಬರಬೇಕಾದ ಹಣ ಇನ್ನು ಬರುವುದಿಲ್ಲ ಎಂಬ ಸುಳ್ಳು ವದಂತಿ ಹರಿದಾಡುತ್ತಿದೆ.
ಅಧಿಕಾರಿಗಳ ವರ್ಗಾವಣೆ: ಬಂಗಾರಪೇಟೆ ತಾಲೂಕಿನ ಜನರಲ್ಲಿ ಹಣ ಬರುತ್ತದೆಯೋ ಇಲ್ಲವೋ ಎಂಬ ಅನುಮಾನ ಶುರುವಾಗಿದೆ. ಈಗಾಗಲೇ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ಹಲವು ಕಾರಣಗಳಿಂದ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಆಹಾರ ಇಲಾಖೆೆ ಉಪ ನಿರ್ದೇಶಕರು ಆಗಸ್ಟ್ನಲ್ಲಿ ವರ್ಗಾವಣೆಗೊಂಡಿದ್ದಾರೆ.
ಅವರ ಸ್ಥಾನಕ್ಕೆ ಹೊಸ ಅಧಿಕಾರಿಯನ್ನು ಸರ್ಕಾರ ನೇಮಿಸದ ಕಾರಣ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಖಲೀಲ್ಗೆ ಇಲಾಖೆಯ ಜವಾಬ್ದಾರಿ ನೀಡಲಾಗಿತ್ತು. ಆದರೆ ಅವರೂ ವರ್ಗಾವಣೆಗೊಂಡಿದ್ದು, ಉಪ ನಿರ್ದೇಶಕರ ಸ್ಥಾನ ಖಾಲಿಯಾಗಿರುವ ಕಾರಣ ಹಣ ವರ್ಗಾವಣೆ ಆಗದೇ ಇರಬಹುದು ಎಂದು ತಿಳಿದುಬಂದಿದೆ.
ಹಣ ವರ್ಗಾವಣೆ ವಿಚಾರವಾಗಿ ಸುಳ್ಳು ವದಂತಿಗೆ ತಲೆ ಕೆಡಿಸಿಕೊಳ್ಳಬಾರದು. ಇಲಾಖೆಯಲ್ಲಿ ಅಧಿಕಾರಿಗಳು ವರ್ಗಾವಣೆಯಾಗುತ್ತಿರುವ ಕಾರಣ ಹಣ ವರ್ಗಾವಣೆ ವಿಳಂಬವಾಗಿದೆ. ಸರ್ಕಾರದಿಂದ ಹಣ ಬಂದಿದ್ದು, ಶೀಘ್ರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ.| ಕೆ.ಪ್ರಕಾಶ್, ಸಹಾಯಕ ನಿರ್ದೇಶಕ ಕೋಲಾರ
ಆಗಸ್ಟ್ ತಿಂಗಳ ಹಣವನ್ನು ಖಾತೆಗೆ ಜಮೆ ಮಾಡಿಲ್ಲ. ಇದರಿಂದಾಗಿ ಎಲ್ಲರೂ ಹಣ ಬರುವುದಿಲ್ಲ ಎಂಬ ಮಾತುಗಳನ್ನು ಹಾಡುತ್ತಿದ್ದಾರೆ. ಸರ್ಕಾರ ಹಣವನ್ನು ಬೇಗ ನೀಡಬೇಕು ಅಥವಾ ಸೆಪ್ಟಂಬರ್ ತಿಂಗಳಿನಲ್ಲಿ ಹೆಚ್ಚುವರಿ ಅಕ್ಕಿ ವಿತರಣೆ ಮಾಡಬೇಕು. | ಮಂಜಮ್ಮ, ಫಲಾನುಭವಿ