

ಬೆಂಗಳೂರು: ಗ್ಯಾರಂಟಿ ಯೋಜನೆಗೆ ಅನುದಾನ ಬಿಡುಗಡೆಯಾಗುವಲ್ಲಿನ ವಿಳಂಬ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಗದ್ದಲ(Delay in release of Grihalakshmi funds; Ruckus between BJP and Congress in the Assembly)ಕ್ಕೆ ಕಾರಣವಾಯಿತು.
ಆಯವ್ಯಯದಲ್ಲಿ ಅನುದಾನ ನಿಗದಿಪಡಿಸಲಾಗಿದ್ದರೂ ತಿಂಗಳು ತಿಂಗಳು ಹಣ ಪಾವತಿಸಲು ಇರುವ ಸಮಸ್ಯೆಯೇನು ಎಂದು ಬಿಜೆಪಿಯ ಅರವಿಂದ ಬೆಲ್ಲದ್ ಹಾಗೂ ಡಾ.ಅಶ್ವತ್ಥನಾರಾಯಣ ಸರ್ಕಾರವನ್ನು ತರಾಟೆ ತೆಗೆದುಕೊಂಡರು.
ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಅರವಿಂದ ಬೆಲ್ಲದ್ ವಿಷಯ ಪ್ರಸ್ತಾಪಿಸಿ, ಸರ್ಕಾರದ ಬಳಿ ಹಣ ಇಲ್ಲವೆ ಎಂದು ಕೆಣಕಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದು ಕೆಲಕಾಲ ಗದ್ದಲವೇರ್ಪಟ್ಟಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಪರವಾಗಿ ಉತ್ತರಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಗೃಹಲಕ್ಷ್ಮಿ ಯೋಜನೆ ಆರಂಭವಾದ 2023ರ ಆಗಸ್ಟ್‌ನಿಂದ 2024ರ ಡಿಸೆಂಬರ್‌ವರೆಗೆ 17 ತಿಂಗಳು ಪ್ರತಿ ತಿಂಗಳು 2000 ರೂ.ಗಳಂತೆ ಧನಸಹಾಯವನ್ನು ಡಿಬಿಟಿ ಮೂಲಕ ಫಲಾನುಭವಿಗಳಿಗೆ ಪಾವತಿ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ 2025ರ ಜನವರಿ ಮತ್ತು ಫೆಬ್ರವರಿಯಲ್ಲಿ ಧನಸಹಾಯ ಬಿಡುಗಡೆಗೆ ಬಾಕಿ ಇದೆ. ಖಜಾನೆಯಲ್ಲಿ ಕೆಲವು ಸಂದರ್ಭಗಳಲ್ಲಿ ಸಂಪನ್ಮೂಲ ಸಂಗ್ರಹದ ಕೊರತೆಯಿರುವುದರಿಂದ ಹಣ ಬಿಡುಗಡೆಗೆ ವಿಳಂಬವಾಗುತ್ತದೆ. ಇದು ಗ್ಯಾರಂಟಿ ಯೋಜನೆಗಳಿಗಷ್ಟೇ ಅಲ್ಲದೇ ವೇತನ ಪಾವತಿಗೂ ಕೆಲವೊಮ್ಮೆ ವಿಳಂಬವಾಗಿದ್ದಿದೆ ಎಂದು ಹೇಳಿದರು.
ಶೀಘ್ರವೇ ಗೃಹಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಎರಡು ತಿಂಗಳ ಧನಸಹಾಯವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.