

ಬೆಂಗಳೂರು: ಕರ್ನಾಟಕ ರೈಲ್ವೆ ಮೂಲಸವಲತ್ತು ಅಭಿವೃದ್ಧಿ ನಿಗಮ (ಕೆ-ರೈಡ್)ಕ್ಕೆ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರ ನೇಮಕಕ್ಕೆ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿರುವುದು ಬೆಳಕಿಗೆ ಬಂದಿದೆ.
ಇದರಿಂದಾಗಿ ಸದ್ಯ ಪ್ರಗತಿಯಲ್ಲಿರುವ 11 ಹೊಸ ರೈಲ್ವೆ ಮಾರ್ಗ ನಿರ್ಮಾಣ, ಭೂಸ್ವಾಧೀನದ ನಂತರದ ಪ್ರಕ್ರಿಯೆ, ಮಹತ್ವದ ಬೆಂಗಳೂರು ಉಪನಗರ ರೈಲ್ವೆ ಯೋಜನೆಗಳಿಗೆ ಅಡಚಣೆ ಉಂಟಾಗುವ ಆತಂಕ ವ್ಯಕ್ತವಾಗಿದೆ.
ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಎರವಲು ಸೇವೆಯ ಮೇಲೆ ನಿಯೋಜನೆಯನ್ನು ಸರ್ಕಾರ ಮುಂದುವರಿಸಿಕೊಂಡು ಬಂದಿದೆ. ಅದೇ ರೀತಿ ನಿಗಮಕ್ಕೆ ಅಗತ್ಯವಿರುವ ಇಂಜಿನಿಯರ್ ಹುದ್ದೆಗಳನ್ನು ಕೆಲವು ಎರವಲು, ಉಳಿದವು ಗುತ್ತಿಗೆ ಆಧಾರದಡಿ ಭರ್ತಿ ಮಾಡಲಾಗುತ್ತದೆ.
ತ್ವರಿತವಾಗಿ ಆಡಳಿತಾತ್ಮಕ ನಿರ್ಧಾರ, ರಾಜ್ಯಸರ್ಕಾರದ ಹಂತದಲ್ಲಿ ಬಗೆಹರಿಯಬೇಕಾದ ಸಮಸ್ಯೆ ವಿಚಾರದಲ್ಲಿ ಎಂಡಿ ನಿರ್ಣಾಯಕರು. ತ್ವರಿತ ಅನುಮೋದನೆ ಪಡೆದ ಅನುಷ್ಠಾನಕ್ಕೆ ಇಂಜಿನಿಯರ್ ಹುದ್ದೆಗಳನ್ನು ತುಂಬಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ ಎಂದು ಕೆ-ರೈಡ್ ಮೂಲಗಳು ತಿಳಿಸಿವೆ.
ವ್ಯವಸ್ಥಾಪಕ ನಿರ್ದೇಶಕ, ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಹಾಗೂ ಸಿವಿಲ್ ವಿಭಾಗದ ಖಾಲಿ ಹುದ್ದೆಗಳನ್ನು ಎರವಲು/ ಗುತ್ತಿಗೆಯಡಿ ಭರ್ತಿಗೆ ಕೆ-ರೈಡ್ ಸೆಪ್ಟೆಂಬರ್‌ನಲ್ಲಿ ಹೊರಡಿಸಿದ್ದ ಅಧಿಸೂಚನೆ ವಾಪಸ್ ಪಡೆದುಕೊಂಡಿದೆ.
ರೈಲ್ವೆ ಮಂಡಳಿ ಮಾರ್ಗಸೂಚಿ ಹಾಗೂ ಅರ್ಹತೆ ಮಾನದಂಡಗಳನ್ನು ಅಧಿಸೂಚನೆ ಪಾಲಿಸಿಲ್ಲ ಎಂದು ಮಂಡಳಿ ಪ್ರಧಾನ ಕಾರ್ಯಕಾರಿ ನಿರ್ದೇಶಕ (ಗತಿಶಕ್ತಿ) ಅನಿಲ್ ಕುಮಾರ್ ಖಂಡೇಲ್‌ವಾಲ ಪತ್ರ ಬರೆದಿದ್ದಾರೆ.
ಈ ಪತ್ರದಲ್ಲಿ ನೀಡಿದ ಸೂಚನೆಯಂತೆ ಕೆ-ರೈಡ್ ಪ್ರಕಟಿತ ಅಧಿಸೂಚನೆಯನ್ನು ವಾಪಸ್ ಪಡೆದು ಕೈತೊಳೆದುಕೊಂಡಿದೆ. ತಿಂಗಳು ಕಳೆದರೂ ಪರಿಷ್ಕೃತ ಅಧಿಸೂಚನೆ ಪ್ರಕಟಿಸಲು ಪ್ರಯತ್ನಿಸಿಲ್ಲ. ಸದ್ಯ ಎಂಡಿ, ಇನ್ನಿತರ ಹುದ್ದೆಗಳು ಖಾಲಿಯಿವೆ ಎಂದು ಮೂಲಗಳು ಮಾಹಿತಿ ನೀಡಿವೆ.
ರೈಲ್ವೆ ಮೂಲಸವಲತ್ತುಗಳನ್ನು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರ ನಿರ್ವಹಿಸುತ್ತಿದ್ದು, ಯೋಜನೆಗಳ ಪ್ರಗತಿ ಮತ್ತು ವೇಗದ ದೃಷ್ಟಿಯಿಂದ ಕೆ-ರೈಡ್ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುವುದು ಅಗತ್ಯವಾಗಿದೆ.
ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರಂತಹ ಹುದ್ದೆಗಳ ಭರ್ತಿಗೆ ವಿಳಂಬ ಮಾಡಿದರೆ, ಎಲ್ಲ ಯೋಜನೆಗಳ ಪ್ರಗತಿಗೆ ಅಡಚಣೆ ಉಂಟಾಗಲಿದೆ ಎಂದು ಬಿಜೆಪಿ ಸಂಸದ ತೇಜಸ್ವಿಸೂರ್ಯ ಕಳವಳ ವ್ಯಕ್ತಪಡಿಸಿದ್ದಾರೆ.
ವಿಶೇಷ ಉದ್ದೇಶಿತ ವಾಹಕ (ಎಸ್‌ಪಿವಿ) ಬೆಂಗಳೂರು ಉಪನಗರ ರೈಲ್ವೆ ಮಾರ್ಗದ ಯೋಜನೆ ಅನುಷ್ಠಾನ, ಸಕಾಲಕ್ಕೆ ಪೂರ್ಣಗೊಳಿಸುವ ದೃಷ್ಟಿಯಿಂದ ಹುದ್ದೆಗಳನ್ನು ತ್ವರಿತ ಭರ್ತಿಗೆ ಆಗ್ರಹಿಸಿದ್ದಾರೆ.
ರೈಲ್ವೆ ಮಂಡಳಿ ಸೂಚನೆ ನೀಡಿತೆಂದು ನೇಮಕಕ್ಕೆ ಹೊರಡಿಸಿದ್ದ ಅಧಿಸೂಚನೆ ವಾಪಸ್ ಪಡೆದಿದ್ದು, ಪರಿಷ್ಕೃತ ಅಧಿಸೂಚನೆ ಪ್ರಕಟಣೆ ವಿಳಂಬ ನಿಲುವು ತಳೆದಿರುವುದು ರಾಜ್ಯಕ್ಕೆ ಮಾರಕವಾಗಲಿದೆ ಎಂದು ತೇಜಸ್ವಿಸೂರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.