

ಬೆಂಗಳೂರು: ರಾಜ್ಯದ ನಾಲ್ಕು ಜಿಲ್ಲೆಗಳ ಗಣಿಬಾಧಿತ ಪ್ರದೇಶದ ಸಮಗ್ರ ಪುನಶ್ಚೇತನಕ್ಕೆ ಒಂದು ವಾರದೊಳಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕರ್ನಾಟಕ ಗಣಿ ಪರಿಸರ ಪುನರುಜ್ಜೀವನ ನಿಗಮದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಬುಧವಾರ ಮಾತನಾಡಿದ ಅವರು, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಗಣಿಗಾರಿಕೆಯಿಂದ ಹಾನಿಗೆ ಒಳಗಾದ ಪ್ರದೇಶದಲ್ಲಿ ಜಾರಿಗೆ ತರುತ್ತಿರುವ ಯೋಜನೆಯಿದಾಗಿದೆ.
ಯೋಜನೆಯಡಿ ಈ ತನಕ ಸಾಧಿಸಿರುವ ಪ್ರಗತಿ ತೃಪ್ತಿಕರವಾಗಿಲ್ಲ. ಪುನಶ್ಚೇತನ ಚಟುವಟಿಕೆಗಳಿಗೆ ವೇಗ ನೀಡಲು ಹೊಣೆ ಇಲಾಖೆಗಳು ಒಂದು ವಾರದೊಳಗೆ ಡಿಪಿಆರ್ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೈಗೆತ್ತಿಕೊಂಡಿರುವ ವಿಶೇಷ ಉದ್ದೇಶಿತ ಕಾರ್ಯಕ್ರಮವಿದು. ವರ್ಷ ಕಳೆದರೂ ಡಿಪಿಆರ್ ತಯಾರಾಗಿಲ್ಲ. ವಿಳಂಬಕ್ಕೂ ಮಿತಿ ಬೇಡವೆ ? ಎಂದು ಗರಂ ಆಗಿ ಇಲಾಖೆಗಳ ಕಾರ್ಯದರ್ಶಿಗಳನ್ನು ಸಿಎಂ ತರಾಟೆಗೆ ತೆಗೆದುಕೊಂಡರು.
ಯೋಜನೆಗಳ ಆಯ್ಕೆ ಹಾಗೂ ಕಾಮಗಾರಿಗಳ ಪ್ರಗತಿ ಮೇಲ್ವಿಚಾರಣಾ ಪ್ರಾಧಿಕಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಆಗಿದ್ದಾರೆ ಎನ್ನುವುದು ಗಮನದಲ್ಲಿಡಿ. ಸಬೂಬು ಹೇಳಿದರೆ ನಡೆಯದು ಎಂದು ಹರಿಹಾಯ್ದರು
ಯೋಜನೆಗಳ ಸಕಾಲಿಕ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಇಲಾಖೆಯಲ್ಲಿ ಯೋಜನಾ ಮೇಲ್ವಿಚಾರಣೆ ಘಟಕ ಸ್ಥಾಪಿಸಬೇಕು. ಕಾಮಗಾರಿಯನ್ನು ನಿಗದಿತ ಕಾಲಮಿತಿಯಲ್ಲಿ ಮುಗಿಸುವ ಜತೆಗೆ ಗುಣಮಟ್ಟವನ್ನು ಖಾತರಿಪಡಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ಮೇಲ್ವಿಚಾರಣಾ ಪ್ರಾಧಿಕಾರ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನರೆಡ್ಡಿ ಅವರು ಒಟ್ಟು 7,928.78 ಕೋಟಿ ರೂ. ಮೊತ್ತದ ಯೋಜನೆಗಳನ್ನು ಅನುಮೋದಿಸಿದ್ದಾರೆ.
ಈ ಪೈಕಿ 3469.41 ಕೋಟಿ ರೂ. ವೆಚ್ಚದ 182 ಯೋಜನೆಗಳಿಗೆ ಅನುಮತಿ ನೀಡಲಾಗಿದೆ. 135 ಕಾಮಗಾರಿಗಳಿಗೆ ಟೆಂಡ್ ಕರೆದಿದ್ದು, 47 ಕಾಮಗಾರಿಗಳಿಗೆ ಕಾರ್ಯಾದೇಶವಾಗಿದೆ. ವಿವಿಧ ಸಂಸ್ಥೆಗಳಿಗೆ 23 ಕಾಮಗಾರಿಗಳನ್ನು ವಹಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಸಮಗ್ರ ಗಣಿ ಪರಿಸರ ಪುನಶ್ಚೇತನ ಯೋಜನೆ ಮೊತ್ತ 24,996.30 ಕೋಟಿ ರೂ.ಗಳಾಗಿದೆ. ಮೂಲ ಸವಲತ್ತು, ಶಿಕ್ಷಣ, ಆರೋಗ್ಯ, ವಸತಿ, ಸಣ್ಣ ನೀರಾವರಿ ಮತ್ತಿತರ ಚಟುವಟಿಕೆಗಳನ್ನು ಒಳಗೊಂಡಿದೆ.
ರೈಲ್ವೆ ಯೋಜನೆಗಳು- 5,271.96 ಕೋಟಿ ರೂ., ಕುಡಿಯುವ ನೀರು ಪೂರೈಕೆ ಯೋಜನೆಗಳು- 4929.84, ಆರೋಗ್ಯ- 1915.78, ಪರಿಸರ ಪುನಃಸ್ಥಾಪನೆ- 2,655.17 ಹಾಗೂ ವಸತಿಗೆ 1,193.98 ಕೋಟಿ ರೂ. ನಿಗದಿಪಡಿಸಲಾಗಿದೆ.
ಸಣ್ಣ ನೀರಾವರಿ 14 ಯೋಜನೆಗಳ ಪೈಕಿ ಏಳು ಪೂರ್ಣಗೊಂಡು, ಉಳಿದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.
ವಿಶೇಷ ಕಾರ್ಯಕ್ರಮಯಿದಾಗಿರುವ ಕಾರಣ ಟೆಂಡರ್‌ನ ವಾಡಿಕೆಯ ಷರತ್ತುಗಳು ಅನ್ವಯಿಸುವುದಿಲ್ಲ. ಶೇಖರಣೆಗೆ ಮುಂಗಡ (ಮೊಬಲೈಜೇಷನ್ ಅಡ್ವಾನ್ಸ್)ವನ್ನು ನೀಡಲಾಗದು. ಬಿಲ್ ಸಲ್ಲಿಕೆಯಾದ ವಾರದೊಳಗೆ ನಿಗಮವು ಹಣ ಪಾವತಿಸಲಿದೆ ಎಂದು ಗುತ್ತಿಗೆದಾರರಿಗೆ ಮನವರಿಕೆ ಮಾಡಿಕೊಡಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ವಸತಿ ಯೋಜನೆಗಳಡಿ ಲಾನುಭವಿಗಳನ್ನು ಶೀಘ್ರವೇ ಗುರುತಿಸಬೇಕು. ಅಂಗನವಾಡಿ ಕಟ್ಟಡ, ವಿದ್ಯಾರ್ಥಿ ನಿಲಯಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಶಾಲೆಗಳ ಕಟ್ಟಡ ದುರಸ್ತಿ, ಕೊಠಡಿ ಮತ್ತು ಪ್ರಯೋಗಾಲಯ ಸ್ಥಾಪನೆ ಕ್ರಮವಹಿಸಲು ತಿಳಿಸಿದರು.
ಲಭ್ಯವಿರುವ ಅನುದಾನದಲ್ಲಿ ನಾಲ್ಕು ಜಿಲ್ಲೆಗಳು ಮಾದರಿ ಜಿಲ್ಲೆಗಳಾಗಿ ಅಭಿವೃದ್ಧಿ ಮಾಡುವಂತೆ ಅಭಿವೃದ್ಧಿ ಆಯುಕ್ತೆ ಡಾ.ಶಾಲಿನಿ ರಜನೀಶ್ ಅವರಿಗೆ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿ, ಮುಂದಿನ ಸಭೆಯಲ್ಲಿ ನಾಲ್ಕು ಜಿಲ್ಲೆಗಳ ಡಿಸಿಗಳು, ಜಿ.ಪಂ. ಸಿಇಒಗಳು ಭಾಗವಹಿಸುವಂತೆ ಸೂಚಿಸಿದರು.