ಅಮಿತಾಭ್​ ಬಚ್ಚನ್​ ಫೋಟೊ, ಹೆಸರು, ಧ್ವನಿಯನ್ನು ಅನುಮತಿ ಇಲ್ಲದೇ ಬಳಸುವಂತಿಲ್ಲ ಎಂದ ದೆಹಲಿ ಹೈಕೋರ್ಟ್!

3
Published on

ನವದೆಹಲಿ: ಅಮಿತಾಬ್ ಬಚ್ಚನ್ ಅವರ ಹೆಸರು, ಚಿತ್ರ ಅಥವಾ ಧ್ವನಿಯನ್ನು ಅವರ ಅನುಮತಿಯಿಲ್ಲದೆ ಬಳಸಬಾರದು ಎಂದು ದೆಹಲಿ ಹೈಕೋರ್ಟ್ ಇಂದು ತೀರ್ಪು ನೀಡಿದೆ.

ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಅಕ್ರಮವಾಗಿ ಬಳಸಲಾಗುತ್ತಿರುವ ಅಮಿತಾಭ್​ ಬಚ್ಚನ್​ರ ಧ್ವನಿ ಹೆಸರು ಮತ್ತು ಚಿತ್ರವನ್ನು ತೆಗೆದು ಹಾಕುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಟೆಲಿಕಾಂ ಸೇವಾ ಪೂರೈಕೆದಾರರಿಗೆ ನ್ಯಾಯಾಲಯ ಸೂಚಿಸಿದೆ.

"ಅಮಿತಾಭ್​ ಬಚ್ಚನ್​ ಪ್ರಸಿದ್ಧ ವ್ಯಕ್ತಿ. ಈ ಮೊದಲು ಬೇರೆ ಬೇರೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ ಏನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ತಮ್ಮ ವ್ಯಾಪಾರ ಹೆಚ್ಚಿಸಲು ಪ್ರಚಾರ ಅಮಿತಾಭ್​ರ ಪ್ರಸಿದ್ಧತೆಯನ್ನು ಅನೇಕರು ಬಳಸುತ್ತಿರುವುದರಿಂದ ನಟ ನೊಂದಿದ್ದಾರೆ" ಎಂದು ನ್ಯಾಯಮೂರ್ತಿ ನವೀನ್ ಚಾವ್ಲಾ ಹೇಳಿದ್ದಾರೆ.

"ಬಿಗ್ ಬಿ" ಎಂದು ಜನಪ್ರಿಯವಾಗಿ ಕರೆಯಲ್ಪಡುವ 80 ವರ್ಷದ ಅಮಿತಾಬ್ ಬಚ್ಚನ್ ಅವರು ತಮ್ಮ "ಹೆಸರು, ಚಿತ್ರ, ಧ್ವನಿ ಮತ್ತು ವ್ಯಕ್ತಿತ್ವದ ಗುಣಲಕ್ಷಣಗಳನ್ನು" ರಕ್ಷಿಸಲು ಕೋರಿ ಅರ್ಜಿಯೊಂದಿಗೆ ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದರು.

'ನಾನು ಏನು ನಡೆಯುತ್ತಿದೆ ಎಂಬುದರ ಸುಳಿವು ನೀಡುತ್ತಿದ್ದೇನೆ. ಯಾರೋ ಟೀ-ಶರ್ಟ್​ಗಳನ್ನು ತಯಾರಿಸುತ್ತಿದ್ದು ಅದರಲ್ಲಿ ಅಮಿತಾಭ್ ಬಚ್ಚನ್​ ಮುಖವನ್ನು ಹಾಕಲು ಪ್ರಾರಂಭಿಸಿದ್ದಾರೆ. ಇನ್ಯಾರೋ ಅವರ ಪೋಸ್ಟರ್​ಅನ್ನು ಮಾರುತ್ತಿದ್ದಾರೆ, ಯಾರೋ ಹೋಗಿ amitabhbacchan.com ಎಂಬ ಡೊಮೇನ್ ನೇಮ್​ ನೋಂದಾಯಿಸಿದ್ದಾರೆ. ಇದರಿಂದಾಗಿ ಅಮಿತಾಭ್ ಬಚ್ಚನ್​ ತೊಂದರೆಗೆ ಒಳಗಾಗುತ್ತಾ ಇರುವುದರಿಂದ ನಾವು ಕೋರ್ಟ್​ ಮೆಟ್ಟಿಲೇರಿದ್ದೇವೆ' ಎಂದು ಬಚ್ಚನ್ ಪರ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು. ಈ ಮೂಲಕ ಅಮಿತಾಭ್​ ಪುಸ್ತಕ ಪ್ರಕಾಶಕರು, ಟಿ-ಶರ್ಟ್ ಮಾರಾಟಗಾರರು ಮತ್ತು ಇತರ ಹಲವಾರು ವ್ಯಾಪಾರಿಗಳ ವಿರುದ್ಧ ತಡೆಯಾಜ್ಞೆ ಕೋರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net