ಪ್ರಾಣ್ ಸುವರ್ಣ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ, "ಮೆಜೆಸ್ಟಿಕ್ 2' ನಟ ಭರತ್ ನಾಯಕನಾಗಿರುವ ಚಿತ್ರ "ರುಕ್ಮಿಣಿ ರಾಧಾಕೃಷ್ಣ'. ಇಲ್ಲಿ ಭರತ್ಗೆ ಇಬ್ಬರು ನಾಯಕಿಯರಿದ್ದು ಕಿರುತೆರೆ ನಟಿ ಮೋಕ್ಷಿತಾ ಪೈ ಮತ್ತು ದೆಹಲಿ ಮೂಲದ ರಂಗಭೂಮಿ ಪ್ರತಿಭೆ, ಮಾಡೆಲಿಂಗ್ನಲ್ಲೂ ಮಿಂಚಿರುವ ರಿಯಾ ಸಚ್ದೇವ್ ನಟಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ "ರಾಧೇಕುಂ' ಸಾಂಗ್ ವೈರಲ್ ಆಗಿದ್ದು, ಇದೇ ಖುಷಿಯಲ್ಲಿ ರಿಯಾ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು. "ನಾನು ಮೂಲತಃ ದೆಹಲಿಯವಳು. ಬಾಲ್ಯದಿಂದಲೂ ನಟಿಯಾಗುವ ಆಸೆಯಿತ್ತು. ದೆಹಲಿ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದು, ಅದೇ ಸಮಯದಲ್ಲಿ ಆ್ಯಕ್ಟಿಂಗ್ ತರಬೇತಿ ಪಡೆದೆ. ಆ್ಯಕ್ಟಿಂಗ್ ನನ್ನ ಜೀವನ ಅಂತ ಮೊದಲೇ ನಿರ್ಧರಿಸಿದ್ದ ಕಾರಣ ಮುಂಬೈಗೆ ಬಂದೆ. ಮಾಡೆಲಿಂಗ್ ಮಾಡುತ್ತಾ ಅಸ್ಮಿತಾ ಎಂಬ ರಂಗತಂಡದ ಜತೆ ಹಲವು ನಾಟಕ ಮಾಡಿದೆ. ಅದರ ಜತೆಗೆ ಆಡಿಷನ್ ನೀಡುತ್ತಿದ್ದೆ. ಕೆಲ ಮ್ಯೂಸಿಕ್ ವಿಡಿಯೋಗಳಲ್ಲಿ ನಟಿಸಿದೆ. ಕ್ರಮೇಣ ದಣ ಭಾರತದಿಂದ ಅವಕಾಶಗಳು ದೊರೆತವು. ತೆಲುಗಿನ "ಹೈಡ್ ಆ್ಯಂಡ್ ಸೀಕ್' ಎಂಬ ವೆಬ್ಸರಣಿಯಲ್ಲಿ ನಟಿಸಿದೆ. ಅದರ ಬೆನ್ನಲ್ಲೇ ಆಡಿಷನ್ ಮೂಲಕವೇ "ರುಕ್ಮಿಣಿ ರಾಧಾಕೃಷ್ಣ'ದಲ್ಲೂ ಅವಕಾಶ ದೊರೆಯಿತು. ಕಥೆಯ ಜತೆಗೆ ನನ್ನ ಪಾತ್ರವೂ ತುಂಬ ಚೆನ್ನಾಗಿದೆ. ನಾನಿಲ್ಲಿ ರುಕ್ಮಿಣಿ ಪಾತ್ರದಲ್ಲಿ ನಟಿಸಿದ್ದೇನೆ. ಹೊಸ ಭಾಷೆಯಾದ ಕಾರಣ ಹಲವು ದಿನಗಳ ಕಾಲ ವರ್ಕ್ಶಾಪ್ ಮಾಡಿ, ತುಂಬ ಸಿದ್ಧತೆ ನಡೆಸಿಯೇ ಶೂಟಿಂಗ್ಗೆ ಬಂದೆ' ಎಂದು ಮಾಹಿತಿ ನೀಡುತ್ತಾರೆ.